ಅಪರಾಧಿಗಳು ಚಾಪೆ ಕೆಳಗೆ ತೂರಿದರೆ ಇದೀಗ ಪೊಲೀಸರು ರಂಗೋಲಿ ಕೆಳಗೆ ತೂರಲು ಮುಂದಾಗಿದ್ದಾರೆ. ಕಿಡಿಗೇಡಿಗಳು, ಆರೋಪಿಗಳನ್ನು ಪತ್ತೆಹಚ್ಚಲು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕ್ಯಾಮೆರಾ ಮೊರೆ ಹೋಗಲಾಗಿದೆ.
ಎಲ್ಲಿ?
ರಾಜಸ್ತಾನ ಪೋಲೀಸರು ಸದ್ಯ ಇಂತಹ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸುವ ಮೂಲಕ ಗಮನ ಸೆಳೆದಿದ್ದಾರೆ. ಜನ ಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸಿ, ಮುಖ ಮರೆಮಾಚಿ ಓಡಾಡಿದರೂ ಈ ಕ್ಯಾಮರಾ ಅಪರಾಧಿಯನ್ನು ಪತ್ತೆಹಚ್ಚಲಿದೆ ಎನ್ನುವುದು ವಿಶೇಷ.
ಕಾರ್ಯವಿಧಾನ
ಸಾಮಾನ್ಯ ಕ್ಯಾಮೆರಾಗಳಿಗಿಂತ ಬಹಳ ಬಿನ್ನವಾಗಿ ಈ ಎಐ ಕ್ಯಾಮೆರಾಗಳು ಕಾರ್ಯ ನಿರ್ವಹಿಸಲಿವೆ. ಸಾಮಾನ್ಯ ಕ್ಯಾಮೆರಾ ಫೋಟೋವನ್ನಷ್ಟೇ ಸೆರೆ ಹಿಡಿದರೆ ಈ ಕ್ಯಾಮೆರಾ ಅದಕ್ಕಿಂತಲೂ ಹೆಚ್ಚಿನ ಕಾರ್ಯ ನಿರ್ವಹಿಸಲಿದೆ.
ಶಂಕಿತರ ಫೋಟೋ ಅಥವಾ ಸಿಸಿ ಟಿವಿಯಲ್ಲಿನ ಫೋಟೋಗಳನ್ನು, ಆರೋಪಿಗಳ ಚಿತ್ರಗಳನ್ನು ಎಐ ಆ್ಯಪ್ ನಲ್ಲಿ ಫೀಡ್ ಮಾಡಿದರೆ ಸಾಕು. ಈ ಕ್ಯಾಮೆರಾ ಆ ವ್ಯಕ್ತಿ ಎಷ್ಟು ಮರೆ ಮಾಚಿದರೂ, ಜನ ಸಂದಣಿ ಇರುವ ಪ್ರದೇಶದಲ್ಲಿ ಇದ್ದರೂ ಪತ್ತೆ ಹಚ್ಚಲಿದೆ. ಜನ ಸಂದಣಿ ಇರುವ ಪ್ರದೇಶದಲ್ಲೂ ಪ್ರತಿಯೊಬ್ಬರ ಮುಖವನ್ನು ಈ ಕ್ಯಾಮೆರಾ ಸ್ಕ್ಯಾನ್ ಮಾಡುವುದು ಇದಕ್ಕೆ ಕಾರಣ.
ಯಶಸ್ವಿ
ಸದ್ಯ ರಾಜಸ್ತಾನ ಪೋಲೀಸರು ಈ ಕ್ಯಾಮೆರಾವನ್ನು ಜೈಪುರದ ಗೋವಿಂದ ದೇವಜಿ ದೇವಸ್ಥಾನದ ಆವರಣದಲ್ಲಿ ಅಳವಡಿಸಿ ಸಫಲರಾಗಿದ್ದಾರೆ. 13 ಅಪರಾಧಿಗಳನ್ನು ಈ ವಿಶೇಷ ಕ್ಯಾಮೆರಾ ಪತ್ತೆ ಹಚ್ಚಿದೆ. ಈ ಪ್ರಯೋಗ ಸಫಲವಾಗಿರುವುದರಿಂದ ಇತರ ರಾಜ್ಯಗಳ ಪೊಲೀಸರೂ ಕೂಡ ಈ ತಂತ್ರಜ್ಞಾನ ಅಳವಡಿಕೆಗೆ ಆಸಕ್ತಿ ತೋರಿದ್ದಾರೆ.