ಚಿಕಾಗೋ: ಅಪರಿಚಿತ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡು ಹಾರಿಸಿದ್ದು, ಈ ಪೈಕಿ ಓರ್ವ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿ ಉಳಿದ 10 ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದ ಚಿಕಾಗೋದಲ್ಲಿ ಭಾನುವಾರ ನಡೆದಿದೆ.
ದುಷ್ಕರ್ಮಿಗಳು ಫ್ಯಾಮಿಲಿ ಟುಗೆದರ್ ಕಾರ್ಯಕ್ರಮಕ್ಕೆ ನುಗ್ಗಿ ಮಕ್ಕಳ ಮೇಲೆ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ 8 ವರ್ಷದ ಬಾಲಕಿ ತಲೆಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದ 10 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.
ದುಷ್ಕರ್ಮಿಗಳು ನಾಲ್ವರು ಮಕ್ಕಳು, ಒಂದು ವರ್ಷದ ಬಾಲಕ ಹಾಗೂ 8 ವರ್ಷದ ಬಾಲಕನಿಗೆ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಪರಿಣಾಮ ಈ ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೊತೆಗೆ 9 ವರ್ಷದ ಬಾಲಕನೋರ್ವನಿಗೆ ಹಾಗೂ 36 ವರ್ಷದ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡು ತಗುಲಿದ 36 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.