ಅಮರಾವತಿ: ತಿರುಪತಿ ಲಡ್ಡು ಅಪವಿತ್ರವಾಗಿದೆ ಎಂಬ ಆರೋಪಗಳು ಲಡ್ಡು ಪ್ರಸಾದಕ್ಕೆ ಬೇಡಿಕೆ ಕುಸಿಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಅಂಥಾದ್ದೇನು ಆಗಿಲ್ಲ. ಈ ಆರೋಪಗಳು ಭಕ್ತರ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ. ಕಳಂಕರಹಿತ ಎಂದು ಟಿಟಿಡಿ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ತಿಮ್ಮಪ್ಪನ ಮಹಾ ಪ್ರಸಾದ ಲಡ್ಡುಗೆ ಮತ್ತೆ ಬೇಡಿಕೆ ಹೆಚ್ಚಿದೆ.
ಲಡ್ಡು ತಯಾರಿಯಲ್ಲಿ ಅಪಚಾರ ನಡೆದಿದೆ ಎಂಬ ಆರೋಪಗಳ ನಡುವೆಯೂ ತಿಮ್ಮಪ್ಪನ ಪ್ರಸಾದವನ್ನು ಪರಮವಿತ್ರ ಎಂದೇ ಭಕ್ತರು ಪರಿಗಣಿಸಿದ್ದಾರೆ. ಇದಕ್ಕೆ ಲಡ್ಡು ಮಾರಾಟದ ಲೆಕ್ಕವೇ ಸಾಕ್ಷಿಯಾಗಿದೆ. ಸೆ. 19 ರಂದು 3.69 ಲಕ್ಷ, 20 ರಂದು 3.16 ಲಕ್ಷ, 21 ರಂದು 3.66 ಲಕ್ಷ ಲಡ್ಡುಗಳನ್ನು ಟಿಟಿಡಿ ಮಾರಾಟ ಮಾಡಿದೆ.
ಅಂದ ಹಾಗೇ, ಲಡ್ಡು ಅಪಚಾರ ಸಂಬಂಧ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಾಳೆ ಮಹಾಶಾಂತಿ ಯಾಗ ನಿರ್ವಹಿಸಲು ಟಿಟಿಡಿ ಅಧಿಕಾರಿಗಳು ಶರವೇಗದ ಸಿದ್ಧತೆಗಳನ್ನು ನಡೆಸಿದ್ದಾರೆ. ನಾಳೆಯ ಶುಭ ರೋಹಿಣಿ ನಕ್ಷತ್ರದಲ್ಲಿ ಮೊದಲಿಗೆ ಮಹಾಶಾಂತಿ ಹೋಮ ನಿರ್ವಹಿಸಿ ನಂತರ ವಾಸ್ತು ಹೋಮವನ್ನು ಆಗಮ ಪಂಡಿತರು ನೆರವೇರಿಸಲಿದ್ದಾರೆ. ಅಂತಿಮವಾಗಿ ಪಂಚಗವ್ಯಗಳಿಂದ ಸಂಪ್ರೋಕ್ಷಣೆ ಮಾಡಲಿದ್ದಾರೆ.
ತಿಮ್ಮಪ್ಪನ ಆರ್ಜಿತ ಸೇವೆಗಳಿಗೆ ಭಂಗ ಉಂಟಾಗದಂತೆ ನಾಳೆಯೇ ಎಲ್ಲಾ ಯಾಗಗಳನ್ನು ಮುಗಿಸಲಿದ್ದಾರೆ. ಈ ಸಂಬಂಧ ಇಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರನ್ನು ಟಿಟಿಡಿ ಅಧಿಕಾರಿಗಳು ಮತ್ತು ಆಗಮ ಪಂಡಿತರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹಾಗೆಯೇ, ಬ್ರಹ್ಮೋತ್ಸವಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇನ್ನು, ಡಿಸಿಎಂ ಪವನ್ ಕಲ್ಯಾಣ್ ಇಂದಿನಿಂದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ಇದು 11 ದಿನ ಮುಂದುವರಿಯಲಿದೆ. ಈ ಮಧ್ಯೆ, ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಬಿ.ಸುರೇಂದ್ರನಾಥ್ ನೇತೃತ್ವದ ತಜ್ಞರ ಸಮಿತಿ, ಭವಿಷ್ಯದಲ್ಲಿ ಲಡ್ಡುಗೆ ಬಳಸುವ ತುಪ್ಪದ ವಿಚಾರದಲ್ಲಿ ಯಾವುದೇ ಅನಾಹುತಗಳು ಉಂಟಾಗದ ರೀತಿಯಲ್ಲಿ ಹಲವು ಶಿಫಾರಸು ಮಾಡಿದೆ.