ಬೆಂಗಳೂರು: ಮಕ್ಕಳು ಚೆನ್ನಾಗಿರಲಿ ಅಂತಾ ಪೋಷಕರು ಅವರು ಕೇಳಿದ್ದನ್ನು ಕೊಡಿಸುತ್ತಾರೆ. ಅದರಲ್ಲಿ ಮಕ್ಕಳ ಮೊದಲ ಬೇಡಿಕೆ ಅಂದ್ರೆ ಮೊಬೈಲ್ ಫೋನ್. ಅದ್ರಲ್ಲೂ ಈ ಕಾಲದ ಮಕ್ಕಳಿಗೆ ಐಫೋನ್ ಕ್ರೇಜ್. ಹೆತ್ತವರು ಐಪೋನ್ ಕೊಡಿಸಲಿಲ್ಲ ಎಂದು ಬಾಲಕರು ಮನೆಬಿಟ್ಟು ಹೋಗಿರುವ ಪ್ರಸಂಗ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭೂಪಸಂದ್ರದಿಂದ ನಾಪತ್ತೆಯಾಗಿದ್ದ 15ವರ್ಷದ ಸುಮನ್ ಕರಿಯರ್ @ಸುಲೇಮಾನ್, ಅಬ್ದುಲ್ ಸಮದ್‌ನ ಪೊಲೀಸರು ಪತ್ತೆಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ನಾಗಶೆಟ್ಟಿಹಳ್ಳಿಯಲ್ಲಿ ವಾಸವಿದ್ದ ಅಬ್ದುಲ್ ಸಮದ್ ಪೋಷಕರು ಈ ಬಾಲಕನ ಪೋಷಕರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಪೋಷಕರು ಸಮದ್‌ಗೆ ಒಂದು ಸ್ಮಾರ್ಟ್ ಫೋನ್ ಸಹ ಕೊಡಿಸಿದ್ದರು. ಹೀಗೆ ಮದರಸಗೆ ಹೋಗುತ್ತಿದ್ದವನಿಗೆ ಸುಲೇಮಾನ್ ಎಂಬ ಬಾಲಕನ ಜೊತೆ ಸ್ನೇಹ ಬೆಳೆದಿತ್ತು. ಸಮದ್ ಹಾಗೂ ಸುಲೇಮಾನ್ ಇಬ್ಬರು ಮೊಬೈಲ್ ಬಳಕೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತು, ರೀಲ್ಸ್‌ಗಳಲ್ಲಿ ಐಫೋನ್ ನೋಡಿದ್ರು. ತಾವು ಐಫೋನ್ ಬಳಕೆ ಮಾಡಿದರೆ ಚೆನ್ನಾಗಿರುತ್ತೆ ಎಂದುಕೊಂಡು ಇತ್ತೀಚೆಗೆ ಮನೆಯಲ್ಲಿ ಐಫೋನ್ ಕೊಡಿಸುವಂತೆ ಪೋಷಕರಿಗೆ ಕೇಳಿದ್ದರು. ಆದರೆ ಪೋಷಕರು ಹಣವಿಲ್ಲ ಐಫೋನ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ರು. ಆಗ ನಾವು ಬಾಂಬೆಗೆ ಹೋಗಿ ದುಡಿದು ಐಫೋನ್ ಕೊಳ್ಳುತ್ತೇವೆ ಎಂದಿದ್ದರಂತೆ. ಪೋಷಕರು ಸಹ ಇದನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೆ ಬಾಲಕರು ಮಾತ್ರ ಹೇಗಾದ್ರೂ ಮಾಡಿ ಐಫೋನ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿ ಮದರಸಗೆ ಹೋಗುವುದಾಗಿ ಹೇಳಿ ಪೋಷಕರ ಕಣ್ತಪ್ಪಿಸಿ ಬಾಂಬೆ ಬದಲು ಗೋವಾಕ್ಕೆ ತೆರಳಿದ್ದರು. ಪೋಷಕರು ಎಷ್ಟೇ ಹುಡುಕಿದರು ಸಹ ಬಾಲಕರು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪೋಷಕರು ಪ್ರಕರಣ ದಾಖಲಿಸಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಸಂಜಯನಗರ ಪೊಲೀಸರು ಬಾಲಕರನ್ನು ಹುಡುಕಿ ಪೋಷಕರಿಗೆ ಒಪ್ಪಿಸಿದ್ದಾರೆ.