ಬೆಂಗಳೂರು: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಅಪಘಾತ ಮಾಡಿದರೆ, ವಾಹನದ ಮಾಲೀಕರೇ ಸಂಬಂಧಪಟ್ಟವರಿಗೆ ಪರಿಹಾರದ ಮೊತ್ತವನ್ನು ಪಾವತಿಸಬೇಕು ಹೊರತಾಗಿ ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿದ ನ್ಯಾ. ಹಂಚಾಟೆ ಸಂಜೀವ್‌ಕುಮಾರ್ ಅವರು ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದ್ದಾರೆ. ಈ ಮೂಲಕ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಮೇಲ್ಮನವಿಯನ್ನು ಪುಸ್ಕರಿಸಲಾಗಿದೆ.
ಅಪಘಾತದಿಂದ ತೊಂದರೆಯಾದವರಿಗೆ ಪರಿಹಾರ ಪಾವತಿಸುವ ಹೊಣೆಗಾರಿಕೆಯಿಂದ ವಿಮಾ ಕಂಪನಿಯನ್ನು ಹೈಕೋರ್ಟ್ ಮುಕ್ತಗೊಳಿಸಿದೆ. ಟ್ರಿಬ್ಯೂನಲ್ ಆದೇಶದ ಪ್ರಕಾರ ನೀಡಬೇಕಿದ್ದ ಪರಿಹಾರದ ಮೊತ್ತವಾದ 2.56 ಲಕ್ಷ ರೂ.ಗೆ ಶೇ 6ರ ವಾರ್ಷಿಕ ಬಡ್ಡಿಯೊಂದಿಗೆ 4.44 ರೂ. ಪಾವತಿಸಬೇಕು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಅಪಘಾತಕ್ಕೀಡಾದ ವಾಹನದ ಮಾಲೀಕರಾದ ಮಹಮ್ಮದ್ ಮುಸ್ತಫಾ ಅವರು ಪರಿಹಾರದ ಮೊತ್ತವನ್ನು ಸಂಬಂಧಪಟ್ಟವರಿಗೆ ಪಾವತಿಸಬೇಕು. ಅಪಘಾತದ ಸಮಯದಲ್ಲಿ ಮೃತಪಟ್ಟ ವ್ಯಕ್ತಿಗೆ 61 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದರು. ಈ ಹಿನ್ನಲೆ ಅವರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ.
2014ರ ಆಗಸ್ಟ್ 11ರಂದು ಟ್ರಿಬ್ಯೂನಲ್ ತೀರ್ಪು ನೀಡಿತ್ತು. ಉಡುಪಿಯ ಕುಂದಾಪುರದಲ್ಲಿ ವಾಸಿಸುತ್ತಿರುವ ಮೃತರ ಕುಟುಂಬದ ಸದಸ್ಯರಾದ ಬೀಬಿ ನೈಸಾ ಮತ್ತು ಹಕ್ಕುದಾರರಿಗೆ ವಾರ್ಷಿಕ ಶೇ. ೮ರ ಬಡ್ಡಿಯೊಂದಿಗೆ 2.56 ಲಕ್ಷ ರೂ.ಗಳ ಪರಿಹಾರ ಕೊಡುವಂತೆ ವಿಮಾ ಕಂಪನಿಗೆ ಆದೇಶಿಸಲಾಗಿತ್ತು.