ನವದೆಹಲಿ: ಅಫ್ಘಾನಿಸ್ತಾನದ ಬಡಾಕ್ಷಣ್ ಪ್ರಾಂತ್ಯದಲ್ಲಿ ಅಪಘಾತಕ್ಕೀಡಾದ್ದ ವಿಮಾನ ಭಾರತದದ ಅಲ್ಲ ಎಂದು ಸರ್ಕಾರ ಹೇಳಿಕೆ ನೀಡಿದೆ.
ಇದು ಭಾರತೀಯ ಪ್ರಯಾಣಿಕ ವಿಮಾನ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮ ವರದಿ ಮಾಡಿತ್ತು.ಆದರೆ ವರದಿಯ ಬಗ್ಗೆ ಎಕ್ಸ್ ನಲ್ಲಿ ಸ್ಪಷ್ಟೀಕರಣ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯ, “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು ಭಾರತೀಯ ಶೆಡ್ಯೂಲ್ಡ್ ಏರ್ಕ್ರಾಫ್ಟ್ ಅಥವಾ ನಾನ್ ಶೆಡ್ಯೂಲ್ಡ್ (ಎನ್ಎಸ್ಒಪಿ)/ ಚಾರ್ಟರ್ ವಿಮಾನವಲ್ಲ. ಇದು ಮೊರಾಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ ಎಂದು ಹೇಳಿಕೊಂಡಿದೆ.
ಭಾರತದಿಂದ ಉಜ್ಬೇಕಿಸ್ತಾನ್ ಮೂಲಕ ಮಾಸ್ಕೋ ಗೆ ತೆರಳುತ್ತಿದ್ದ ಸಣ್ಣ ಚಾರ್ಟರ್ ಜೆಟ್ ಶನಿವಾರ ಸಂಜೆ ಅಫ್ಘಾನಿಸ್ತಾನದ ರಾಡಾರ್ ನಿಂದ ಕಣ್ಮರೆಯಾಗಿದ್ದು ಇದೀಗ ಅಫ್ಘಾನಿಸ್ತಾನದ ಪರ್ವತ ಪ್ರದೇಶದಲ್ಲಿ ಪತನಗೊಂಡಿರಬಹುದು ಎಂದು ಹೇಳಲಾಗಿದೆ. ವಿಮಾನದ ಹುಡುಕಾಟ ನಡೆಯುತ್ತಿದೆ ಎಂದು ರಷ್ಯಾದ ವಾಯುಯಾನ ಸಂಸ್ಥೆ ರೊಸಾವಿಯಾಟ್ಸಿಯಾ ಭಾನುವಾರ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ‘ಫ್ರೆಂಚ್ ನಿರ್ಮಿತ ಡಸ್ಸಾಲ್ಟ್ ಫಾಲ್ಕನ್ 10 ಜೆಟ್ ವಿಮಾನವನ್ನು ರಷ್ಯಾದಲ್ಲಿ ನೋಂದಾಯಿಸಲಾಗಿದೆ ಇದರಲ್ಲಿ ನಾಲ್ಕು ಸಿಬ್ಬಂದಿ ಮತ್ತು ಇಬ್ಬರು ಪ್ರಯಾಣಿಕರು ಸೇರಿದಂತೆ ಆರು ಮಂದಿ ವಿಮಾನದಲ್ಲಿದ್ದರು ಎಂದು ಹೇಳಿದೆ.ಅಪಘಾತದ ಕಾರಣ ಮತ್ತು ಸಾವುನೋವುಗಳ ಬಗ್ಗೆ ಯಾವುದೇ ವಿವರಗಳು ಲಭಿಸಿಲ್ಲ ಎಂದು ತಿಳಿದು ಬಂದಿದೆ.