ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅಭಿಮಾನಿಗಳ ‘ಅಂಧಾಭಿಮಾನ” ಮುಂದುವರೆದಿದೆ. ಈ ಹುಚ್ಚಾಟಕ್ಕೆ ಮಕ್ಕಳ ರಕ್ಷಣಾ ಆಯೋಗ ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿ 15 ಮಂದಿ ಸದ್ಯ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಜೈಲಿನಲ್ಲಿ ಅವರಿಗೆ 6106 ಎಂಬ ಖೈದಿ ಸಂಖ್ಯೆ ನೀಡಲಾಗಿದೆ. ಆದರೆ ಹುಚ್ಚು ಅಭಿಮಾನಿಗಳು ಇದನ್ನೂ ತಮ್ಮ ಅಂಧಾಭಿಮಾನಕ್ಕೆ ಬಳಸಿಕೊಂಡಿದ್ದು, ದರ್ಶನ್ ಅಭಿಮಾನಿಯೊಬ್ಬ ಪುಟ್ಟ ಕಂದಮ್ಮನಿಗೆ ದರ್ಶನ್ ಖೈದಿ ನಂಬರ್ ಇರುವ ಬಟ್ಟೆ ಹಾಗೂ ಕೋಳ ಜೊತೆಗಿಟ್ಟು ಫೋಟೋ ಶೂಟ್ ಮಾಡಿಸಿ ಹುಚ್ಚಾಟ ಮೆರೆದಿದ್ದಾನೆ. ಈ ಹುಚ್ಚಾಟದ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಆಯೋಗ ಬಿಸಿ ಮುಟ್ಟಿಸಲು ಮುಂದಾಗಿದೆ. ಈಗಾಗಲೇ ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಮಕ್ಕಳ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಮಗುವಿಗೆ ಖೈದಿ ನಂಬರ್ ಹಾಕಿಸಿ ಫೋಟೋ ಶೂಟ್ ಮಾಡಿದ್ದ ಪೋಷಕರಿಗೆ ನೋಟಿಸ್ ಕೊಡಲು ಮುಂದಾಗಿದೆ. ಅಲ್ಲದೆ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೈಬರ್ ಅಪರಾಧ ಇಲಾಖೆಗೆ ಮತ್ತು ಪೊಲೀಸರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಬುಧವಾರ ನಿರ್ದೇಶನ ನೀಡಿದೆ.
