ಬೆಂಗಳೂರು: ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭೆ ಟಿಕೆಟ್ ನೀಡುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಕೆಎಸ್ ಈಶ್ವರಪ್ಪ ಅವರು ಶುಕ್ರವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಫಲಪ್ರದವಾಗಿದ್ದು, ರಾಜ್ಯದಲ್ಲಿನ ಕೆಲ ವಿಷಯಗಳನ್ನು ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ನನ್ನ ಪುತ್ರ ಕಾಂತೇಶ್ ಗೆ ಲೋಕಸಭೆ ಟಿಕೆಟ್ ಕೇಳಿದ್ದೇನೆ. ಪಾರ್ಲಿಮೆಂಟರಿ ಬೋರ್ಡ್, ಚುನಾವಣಾ ಸಮಿತಿ ಇದ್ದು, ಟಿಕೆಟ್ ನೀಡುವುದು ನೀಡದೇ ಇರುವುದು ಅವರ ನಿರ್ಧಾರ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇನೆ ಎಂದರು.
ಇನ್ನು ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಮನ ವಿಷಯದಲ್ಲಿ ರಾಜಕೀಯ ಮಾಡಿದರೆ ನಾವು ಸರ್ವನಾಶವಾಗಿ ಹೋಗಲಿ. ನಾವು ರಾಮಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಅದಕ್ಕೆ ಕೋರ್ಟ್ ಸಹ ಸಹಕಾರ ನೀಡಿದೆ. ರಾಮ ಮಂದಿರ ನಿರ್ಮಾಣಕ್ಕೆ ಭಿನ್ನಾಭಿಪ್ರಾಯ ಇದ್ದವರೂ ಸಹಕರಿಸಿದ್ದಾರೆ. ದೇಶದ ಎಲ್ಲಾ ಹಿಂದೂಗಳು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನೆಯಾಬೇಕು ಎಂದು ತಿಳಿಸಿದರು.