ವಾಷಿಂಗ್ಟನ್: ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ, ರಾಜತಾಂತ್ರಿಕ, ನೊಬೆಲ್ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್(100) ಅವರು ಬುಧವಾರ ನಿಧನರಾಗಿದ್ದಾರೆ.
ಜರ್ಮನ್ ಮೂಲದವರಾದ ಕಿಸ್ಸಿಂಜರ್ ಅವರು ತಮ್ಮ ಮನೆಯಲ್ಲಿ ನಿಧನರಾದರು ಎಂದು ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್ ಅಸೋಸಿಯೇಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಕಿಸ್ಸಿಂಜರ್ ಅವರು ಅಮೇರಿಕಾದ ಮಾಜಿ ಅಧ್ಯಕ್ಷರುಗಳಾದ ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ಅಮೆರಿಕದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಹೆನ್ರಿ ಕಿಸ್ಸಿಂಜರ್ ಅವರು ಎರಡನೇ ಮಹಾಯುದ್ಧದ ನಂತರ ಜಾಗತಿಕ ಬೆಳವಣಿಗೆಗಳ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ.
ಅದರಲ್ಲೂ, ಅಮೆರಿಕದ ರಾಜತಾಂತ್ರಿಕರಾಗಿ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರ ಬದಲಾವಣೆಗಳನ್ನು ತಂದ ಖ್ಯಾತಿಯನ್ನು ಇವರು ಹೊಂದಿದ್ದಾರೆ. 100 ವರ್ಷ ತುಂಬಿದರೂ ಸಕ್ರಿಯರಾಗಿದ್ದ ಅವರು ಶ್ವೇತಭವನದ ಮೇಲೆ ಪ್ರಭಾವ ಬೀರುವಷ್ಟು ಹಿಡಿತ ಸಾಧಿಸಿದ್ದರು. ಕಳೆದ ಜುಲೈನಲ್ಲಷ್ಟೇ ಅವರು ಅವರು ಚೀನಾಗೆ ತೆರಳಿ, ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.
ಇದರ ಜೊತೆಗೆ ವಿವಾದಗಳಿಗೂ, ಹೆನ್ರಿ ಕಿಸ್ಸಿಂಜರ್ ಅವರು ಫೇಮಸ್ಸ್ ಆಗಿದ್ದರು.1923ರಲ್ಲಿ ಜರ್ಮನಿಯಲ್ಲಿ ಜನಿಸಿದ ಹೆನ್ರಿ ಕಿಸ್ಸಿಂಜರ್ ಅವರು 1938ರಲ್ಲಿ ಕಿಸ್ಸಿಂಜರ್ ಕುಟುಂಬದೊಂದಿಗೆ ಅಮೆರಿಕಾಕ್ಕೆ ಬಂದು ನೆಲೆಸಿ, 1943ರಲ್ಲಿ ಅಲ್ಲಿನ (ಅಮೆರಿಕಾ) ಪೌರತ್ವ ಪಡೆದರು. ಬಳಿಕ ಯುಎಸ್ ಸೈನ್ಯದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.ನಂತರ ಕೌಂಟರ್ ಇಂಟೆಲಿಜೆನ್ಸ್ ಕಾರ್ಪ್ಸ್ನಲ್ಲಿ ಸೇವೆ ಸಲ್ಲಿಸಿದರು.ಇವರ ನಿಧನಕ್ಕೆ ಜಾಗತಿಕ ಗಣ್ಯರು ಸಂತಾಪ ಸೂಚಿಸಿದ್ದಾರೆ.