ನವದೆಹಲಿ: ಕೇರಳದ ವಯನಾಡಿನಲ್ಲಿ ಚುನಾವಣೆ ಬಳಿಕ ರಾಹುಲ್ ಗಾಂಧಿ ಬೇರೇಡೆ ಮುಖ ಮಾಡಲಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅಮೇಥಿಯಲ್ಲೂ ಸೋಲಿನ ಭಯ ಕಂಡಿರುವ ರಾಹುಲ್ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್-ದುರ್ಗಾಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಯನಾಡಿನಲ್ಲಿ ಸೋಲಿನ ಬಗ್ಗೆ ತಿಳಿದಿರುವ ರಾಹುಲ್ ಗಾಂಧಿ ಮತ್ತೊಂದು ಕ್ಷೇತ್ರಕ್ಕೆ ಹೋಗಿದ್ದಾರೆ. ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದರು. ಆದರೆ ಅವರು ಆಯ್ಕೆ ಮಾಡಿಕೊಂಡಿರುವುದು ಯಾವ ಕ್ಷೇತ್ರ? ರಾಯ್‌ಬರೇಲಿ ,ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೊಕೆ ರಾಹುಲ್‌ಗೆ ಭಯ ಹೀಗಿದ್ದರೂ ಸಹ ರಾಹುಲ್ ಗಾಂಧಿ ಹೇಳೋದು ಹೆದರಬೇಡಿ ಅಂತಾ, ನಾನು ರಾಹುಲ್ ಗಾಂಧಿಗೆ ಹೇಳುತ್ತೇನೆ ಹೆದರಬೇಡಿ, ಓಡಿ ಹೋಗಬೇಡಿ ಎಂದು ಲೇವಡಿ ಮಾಡಿದ್ದಾರೆ.
ಗಾಂಧಿ ಕುಟುಂಬದ ನಡೆಯಿಂದ ಚುನಾವಣಾ ಫಲಿತಾಂಶ ಸ್ಪಷ್ಟವಾಗಿದೆ, ಯಾವುದೇ ಸಮೀಕ್ಷೆ ನಡೆಸುವ ಅಗತ್ಯ ಇಲ್ಲ. ಕಾಂಗ್ರೆಸ್ ಮೊದಲೇ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸಿದೆ, ಕಳೆದ ಬಾರಿಯಷ್ಟೂ ಸ್ಥಾನಗಳು ಈ ಬಾರಿ ʻಕೈʼಗೆ ಸಿಗಲ್ಲ ಎಂದರು.
ಸಂವಿಧಾನವನ್ನು ಬದಲಾಯಿಸಿ ದಲಿತ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾಗಳನ್ನು ಕಸಿದುಕೊಂಡು ಜಿಹಾದಿ ವೋಟ್ ಬ್ಯಾಂಕ್‌ಗೆ ಮೀಸಲಾತಿ ನೀಡಲು ಕಾಂಗ್ರೆಸ್ ಬಯಸಿದೆ. ಅವರಿಗೆ ಅಭಿವೃದ್ಧಿಯನ್ನು ತರಲು ಸಾಧ್ಯವಿಲ್ಲ. ಅವರು ಮತಕ್ಕಾಗಿ ಸಮಾಜವನ್ನು ವಿಭಜಿಸುವುದು ಹೇಗೆಂಬುದು ತಿಳಿದಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.