ಅಮೇರಿಕಾ: ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದೆ. ಮೃತರನ್ನು ಆದಿತ್ಯ ಅದ್ಲಾಖಾ (26) ಎಂದು ಗುರುತಿಸಲಾಗಿದೆ. ಆದಿತ್ಯ ಸಿನ್ಸಿನಾಟಿ ವೈದ್ಯಕೀಯ ಶಾಲೆಯ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರ ವಿಭಾಗದಲ್ಲಿ ನಾಲ್ಕನೇ ವರ್ಷದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದರು. ಗುಂಡಿನ ದಾಳಿ ಒಳಗಾಗಿ ಗೋಡೆಗೆ ಡಿಕ್ಕಿ ಹೊಡೆದ ಕಾರಿನೊಳಗೆ ಆದಿತ್ಯ ಪತ್ತೆಯಾಗಿದ್ದರು.
ನವೆಂಬರ್ ತಿಂಗಳ ಆರಂಭದಲ್ಲೇ ಆದಿತ್ಯನ ಹತ್ಯೆಯಾಗಿದೆ. ನ. 9 ರಂದು ಸಿನ್ಸಿನಾಟಿ ಪೊಲೀಸ್ ಲೆಫ್ಟಿನೆಂಟ್ ಜೊನಾಥನ್ ಕನ್ನಿಂಗ್ಹ್ಯಾಮ್ ವೆಸ್ಟರ್ನ್ ಹಿಲ್ಸ್ ವಯಾಡಕ್ಟ್‌ನ ಮೇಲಿನ ಡೆಕ್‌ನಲ್ಲಿ ವಾಹನದೊಳಗೆ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಗುರುತಿಸಿದ್ದರು.
ಅಂದು ಬೆಳಗ್ಗೆ 6:20ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆದಿತ್ಯ ಅದ್ಲಾಖಾ ಅವರನ್ನು ಯುಸಿ ಮೆಡಿಕಲ್ ಸೆಂಟರ್‌ಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಎರಡು ದಿನಗಳ ನಂತರ ಆದಿತ್ಯ ಮೃತಪಟ್ಟಿದ್ದಾನೆ.
ಗುಂಡಿನ ದಾಳಿ ವರದಿಯಾದಾಗಿನಿಂದ ಯಾರನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ. ಆದಿತ್ಯ ಅದ್ಲಾಖಾ ತನ್ನ ವೈದ್ಯಕೀಯ ಶಿಕ್ಷಣಕ್ಕಾಗಿ ಉತ್ತರ ಭಾರತದಿಂದ ಅಮೆರಿಕದ ಸಿನ್ಸಿನಾಟಿಗೆ ಹೋಗಿದ್ದರು. ಇದಕ್ಕೂ ಮೊದಲು ನವದೆಹಲಿಯ ರಾಮಜಾಸ್ ಕಾಲೇಜಿನಲ್ಲಿ 2018ರಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2020ರಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಶರೀರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು.