ವಾಷಿಂಗ್ಟನ್: ಅಮೇರಿಕಾದಲ್ಲಿ ಭಾರತೀಯ ಮೂಲದ ಖ್ಯಾತ ವೈದ್ಯರೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಲಬಾಮಾ ನಗರದ ಟುಸ್ಕಲುಸಾ ಎಂಬಲ್ಲಿ ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಡಾ.ರಮೇಶ್ ಬಾಬು ಪೆರಮಸೆಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಅಮೆರಿಕದಲ್ಲಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿರುವ ಖ್ಯಾತ ವೈದ್ಯರು. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯವರಾಗಿದ್ದ ಡಾ.ರಮೇಶ್, ಕ್ರಿಮ್ಸನ್ ನೆಟ್ವರ್ಕ್ ಹೆಸರಿನ ಸ್ಥಳೀಯ ವೈದ್ಯರ ಸಂಘಟನೆಯ ಸಂಸ್ಥಾಪಕ ಹಾಗೂ ವೈದ್ಯಕೀಯ ನಿರ್ದೇಶಕರಲ್ಲೊಬ್ಬರು. ಟುಸ್ಕಲೂಸಾದಲ್ಲಿ ವೈದ್ಯರಾಗಿಯೂ ಪ್ರಾಕ್ಟೀಸ್ ಮಾಡುತ್ತಿದ್ದ ಅವರು, ಆರೋಗ್ಯಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಯಿಂದ ಖ್ಯಾತರಾಗಿದ್ದರು. ಈ ಬಗ್ಗೆ ಕ್ರಿಮ್ಸನ್ ಕೇರ್ ನೆಟ್ವರ್ಕ್ ತಂಡ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದೆ. ‘ಈ ಕ್ಷಣಕ್ಕೆ ತಿಳಿದುಬಂದಿರುವಂತೆ ಡಾ.ರಮೇಶ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಶೋಕದಲ್ಲಿರುವ ಅವರ ಕುಟುಂಬದವರು ಸದ್ಯಕ್ಕೆ ಖಾಸಗಿತನ ಕೋರಿದ್ದಾರೆ. ಅವರ ಬಗ್ಗೆ ಅಪಾರ ಪ್ರೀತಿ ಹಾಗೂ ವಿಶ್ವಾಸವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಅವರು ನಮಗಾಗಿ ಏನು ಮಾಡಲು ಬಯಸಿದ್ದರೋ ಅದಕ್ಕಾಗಿ ಅವರನ್ನು ನಾವು ಮುಂದೆಯೂ ಗೌರವಿಸುತ್ತೇವೆ. ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದಗಳು” ಎಂದು ಹೇಳಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.