ಚಿತ್ರದುರ್ಗ: ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದೆ ಇದ್ದಿದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಮ, ಹೀಗಿರುವಾಗ ಆ ರಾಮನಿಗೇಕೆ ಹೋಗಿ ಅವರು ಪೂಜಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರ ತವರು ಸಿದ್ಧರಾಮನಹುಂಡಿಯಲ್ಲೇ ಶ್ರೀರಾಮನ ದೇವಸ್ಥಾನ ಇದೆ, ಅವರು ಅಲ್ಲೇ ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಹೀಗಾಗಿ ಬಿಜೆಪಿಯವರನ್ನ ಕರೆಸಿಕೊಂಡು ಅಲ್ಲಿ ಭಜನೆ ಮಾಡುತ್ತಾರೆ. ಆದ್ರೆ ನಮ್ಮ ರಾಮ ಎಲ್ಲಾ ಕಡೆ ಇದ್ದಾನೆ, ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ, ಗೊತ್ತಲ್ವಾ ಆಂಜನೇಯ ಏನು ಮಾಡಿದ ಅಂತಾ? ಎಂದು ಕುಟುಕಿದ್ದಾರೆ.
ಅಲ್ಲದೇ ನಮ್ಮ ಸಮುದಾಯದವರು ರಾಮ ಹಾಗೂ ಆಂಜನೇಯ, ಹನುಮಂತ ಎಂಬ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಆದರೆ ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿಯಾಗಿದೆ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಟಿಸುವ ಭ್ರಮೆ ಬಿಜೆಪಿಯವರಿಗಿದೆ ಎಂದು ಆರೋಪಿಸಿದರು.