ಅಯೋಧ್ಯೆ: ಅಸಂಖ್ಯ ರಾಮ ಭಕ್ತರು ಎದುರು ನೋಡ್ತಿದ್ದ ರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜ.22 ನಿನ್ನೆ ಸಂಪನ್ನಗೊಂಡಿದೆ. ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಮೊದಲ ದಿನವಾದ ಇಂದು ಬೆಳಗ್ಗಿನ ಜಾವದಿಂದಲೇ ಶ್ರೀರಾಮಲಲ್ಲಾನ ದರ್ಶನ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲು ಭಕ್ತರು ದೇವಾಲಯಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಹೀಗಾಗಿ ರಾಮ ಮಂದಿರದ ಹೊರಗೆ ಭಾರೀ ಜನದಟ್ಟಣೆ ಮುಂಜಾನೆಯಿಂದಲೇ ಕಂಡುಬಂದಿದೆ.
ಭಕ್ತರು ರಾಮಮಂದಿರದಲ್ಲಿ ಬೆಳಿಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ದರ್ಶನ ಪಡೆಯಬಹುದಾಗಿದೆ. ಆದರೆ ಶ್ರೀರಾಮನ ದರ್ಶನಕ್ಕೆ ತೀವ್ರ ಚಳಿಯನ್ನು ಲೆಕ್ಕಿಸದೇ ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದು ಕಂಡುಬಂತು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.