ಮಂಗಳೂರು: ಮುಂದಿನ ವರ್ಷ ಜನವರಿ 22ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ ಎನ್ನಲಾಗ್ತಿದೆ.
ಹಾಗಾಗಿ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕರ್ನಾಟಕ ಕರಾವಳಿಯ ಕನ್ನಡಿಗರೊಬ್ಬರ ಉಸ್ತುವಾರಿಯಲ್ಲಿ ನಡೆಯಲಿದೆ. ಇಡೀ ಬ್ರಹ್ಮಕಲಶೋತ್ಸವದ ಪ್ರಧಾನ ಅಧ್ವರ್ಯ ಸ್ಥಾನ ಕೂಡ ಕನ್ನಡಿಗರೇ ಆದ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಒದಗಿ ಬಂದಿದೆ. ಕರ್ನಾಟಕ-ಕೇರಳ ಗಡಿಭಾಗ ತಲಪಾಡಿಯ ರಾಜಪುರೋಹಿತ ಬಿರುದಾಂಕಿತ ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಅವರ ಉಸ್ತುವಾರಿಯಲ್ಲಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. ಈ ಕುರಿತು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಸೇರಿದಂತೆ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಕಾರ್ಯಕ್ರಮಗಳು ಸುಮಾರು 48 ದಿನಗಳ ಕಾಲ ವಿಧಿವತ್ತಾಗಿ ನಡೆಯಲಿದೆ. ಇನ್ನು ಅಯೋಧ್ಯೆ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನ ಅಧ್ವರ್ಯ ಸ್ಥಾನದಿಂದ ಸ್ವತಃ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಲಿದ್ದು, ಪ್ರಧಾನಿ ಸಹಿತ ದೇಶಾದ್ಯಂತದ ಸಾಧು, ಸಂತರು, ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.