ನವದೆಹಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಭಗವಾನ್ ಶ್ರೀರಾಮನ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಲಿದೆ. ಇದರ ನಡುವೆ ದೇವಾಲಯವನ್ನು ಅವಹೇಳನ ಮಾಡುವ ಮತ್ತು ಅದರ ಮಹತ್ವದ ಬಗ್ಗೆ ಅನುಮಾನವನ್ನು ಉಂಟುಮಾಡುವ ವೀಡಿಯೊಗಳು ಸೋಶಿಯಲ್ ಮೀಡಿಯಾದಲಲ್ಲಿ ಹರಿದಾಡುತ್ತಿವೆ. ಸದ್ಯ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಹೊಸ ರಾಮ ಮಂದಿರವು ಹಿಂದೂಗಳು ಇಸ್ಲಾಂಗೆ ಮತಾಂತರಗೊಳ್ಳಲು ಕಾರಣವಾಗುತ್ತದೆ ಎಂದು ಹೇಳಿರುವ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಹಿಂದೂಗಳು ಮುಸ್ಲಿಮರಾಗಿ ಹೊರಬರುತ್ತಾರೆ. ನಮ್ಮ ಬೇರುಗಳಿಗೆ ಸಂಪರ್ಕವಿರುವ ಸ್ಥಳಗಳಿಗೆ ಭೇಟಿ ನೀಡುವವರ ಮೇಲೆ ನಮ್ಮ ನಂಬಿಕೆ (ಇಸ್ಲಾಂ) ತನ್ನ ಬೆಳಕನ್ನು ಬೆಳಗಿಸುತ್ತದೆ ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಮೋದಿ ತಪ್ಪು ಮಾಡಿರಬಹುದು, ಆದರೆ ಅದು ನಮಗೆ ವರವಾಗಿ ಕೆಲಸ ಮಾಡುತ್ತದೆ. ಮುಸ್ಲಿಮರು ಮತ್ತೊಮ್ಮೆ ಎದ್ದು ನಿಲ್ಲುವ ಸ್ಥಳ ಇದು ಎಂದು ಅಲ್ಲಾನಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ’ ಎಂದು ಮಿಯಾಂದಾದ್ ಈ ವಿಡಿಯೋದಲ್ಲಿ ಹೇಳಿದ್ದಾರೆ. ದೇಶದ ಪ್ರಖ್ಯಾತ ಸಂನ್ಯಾಸಿಗಳು, ಪ್ರಮುಖ ವ್ಯಕ್ತಿಗಳು ಮತ್ತು ಹಲವಾರು ಭಕ್ತರು ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಹ್ವಾನ ಸ್ವೀಕಾರ ಮಾಡಿದ್ದಾರೆ.