ನವದೆಹಲಿ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಪ್ರಯುಕ್ತ ಎಲ್ಲಾ ಧರ್ಮದವರು ‘ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್’ ಎಂಬ ಮಂತ್ರ ಪಠಿಸುಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯ ಪೋಷಕ ಮತ್ತು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಕರೆ ನೀಡಿದ್ದಾರೆ.
“ರಾಮ ಮಂದಿರ್, ರಾಷ್ಟ್ರ ಮಂದಿರ್ – ಎ ಕಾಮನ್ ಹೆರಿಟೇಜ್” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮನೆತನ, ಧಾರ್ಮಿಕ ನಂಬಿಕೆ ಇತ್ಯಾದಿ ವ್ಯತ್ಯಾಸಗಳ ಹೊರತಾಗಿಯೂ ದೇಶದ ಮುಸ್ಲಿಮರು ಹಾಗೂ ಇತರ ಹಿಂದೂಯೇತರರು ಭಾರತದ ಅವಿಭಾಜ್ಯ ಅಂಗವೇ ಆಗಿದ್ದಾರೆ ಎಂದಿದ್ದಾರೆ.
ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಾಮೂಹಿಕ ಅಭಿವ್ಯಕ್ತಿಗೆ ಇದೊಂದು ಸದಾವಕಾಶವಾಗಿದ್ದು ಎಲ್ಲಾ ಧರ್ಮದ ನಂಬಿಕೆಗಳನ್ನು ಆಚರಿಸುವ ಜನರು ಧಾರ್ಮಿಕ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಕುಮಾರ್ ಮನವಿ ಮಾಡಿದ್ದಾರೆ.