ಆನೇಕಲ್: ಜಿಗಣಿ ಪೊಲೀಸರು ಗಾಂಜಾ ರಿಕವರಿಗಾಗಿ ಒರಿಸ್ಸಾಗೆ ತೆರಳಿದ್ದರು.ಈ ವೇಳೆ ಜಿಗಣಿ ಪೊಲೀಸರು ಅರೆಸ್ಟ್ ಆಗಿದ್ದಾರೆ. 6 ಜನ ಸಿಬ್ಬಂದಿಗಳ ತಂಡ ಒರಿಸ್ಸಾಗೆ ತೆರಳಿದ್ದು, ಕಾನ್ಸ್‌ಟೇಬಲ್ ಆನಂದ್ ಫಾರೆಸ್ಟ್ ಒಳಗೆ ಮೊದಲು ಹೋಗಿದ್ದಾರೆ. ಒರಿಸ್ಸಾ ಪೊಲೀಸರು ಪ್ಲಾನ್ ಮಾಡಿಕೊಂಡು ಜಿಗಣಿ ಪೊಲೀಸರಿಗಾಗಿ ಕಾದಿದ್ದರು. ಗಾಂಜಾ ಹಿಡಿದು ಹೊರ ಬರ್ತಿದ್ದಂತೆ ಪೊಲೀಸರನ್ನು ಅರೆಸ್ಟ್ ಮಾಡಿದ್ದಾರೆ. ನಾವು ಪೊಲೀಸರು ಎಂದು ಹೇಳಿದ್ರು ಒರಿಸ್ಸಾ ಪೊಲೀಸರು ಕೇಳದೆ ಅರೆಸ್ಟ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶದ ಮೇಲೆ ಜಿಗಣಿ ಪೊಲೀಸ್ ತಂಡ ತೆರಳಿತ್ತು. ಸದ್ಯ ಕಾನ್ಸ್‌ಟೇಬಲ್ ಆನಂದನ್ನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಕಾನ್ಸ್‌ಟೇಬಲ್ ಅರೆಸ್ಟ್ ಆಗ್ತಿದ್ದಂತೆ ಇನ್ಸ್ಪೆಕ್ಟರ್ ಒರಿಸ್ಸಾಗೆ ತೆರಳಿದ್ದಾರೆ. ಆನಂದ್ ಬಿಡುಗಡೆಗೆ ಇನ್ಸ್ಪೆಕ್ಟರ್ ಮಂಜುನಾಥ್ ಕಾನೂನು ಪ್ರಕ್ರಿಯೆ ಮುಂದುವರೆಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ಸಂಜಯ್ ರಾವುತ್ ಸೇರಿದಂತೆ ಮೂವರನ್ನು ಜಿಗಣಿ ಪೊಲೀಸರು ಅಕ್ಟೋಬರ್ 13ರಂದು ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಒಡಿಶಾದಿಂದ ಗಾಂಜಾ ತಂದಿರುವುದಾಗಿ ಹೇಳಿದ್ದ. ಆತ ನೀಡಿದ್ದ ಮಾಹಿತಿ ಮೇರೆಗೆ ಜಿಗಣಿ ಪೊಲೀಸ್ ಠಾಣೆಯ ಆರು ಪೊಲೀಸ್ ಸಿಬ್ಬಂದಿ ಮತ್ತು ಒರಿಯಾ ಭಾಷೆ ಬಲ್ಲ ಯುವಕನೊಂದಿಗೆ ಒಡಿಶಾಗೆ ತೆರಳಿದ್ದರು. ಒಡಿಶಾದ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಕಲೆಹಾಕಿ ಕ್ರೈಂ ಕಾನ್‌ಸ್ಟೆಬಲ್ ಆನಂದ್ ಮತ್ತು ಆರೋಪಿಯ ಪರಿಚಯಸ್ಥ ಶಾಮ್ ಹಾಗೂ ಜಿಗಣಿಯ ಯುವಕ ಮಾರುವೇಷದಲ್ಲಿ ಗಾಂಜಾ ಖರೀದಿ ಮಾಡುವ ನೆಪದಲ್ಲಿ ಸ್ಥಳಕ್ಕೆ ತೆರಳುತ್ತಿದ್ದರು. 17 ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ಸಂದರ್ಭದಲ್ಲಿ ಒಡಿಶಾದ ಪೊಲೀಸರು ಜಿಗಣಿಯ ಪೊಲೀಸ್ ಕಾನ್‌ಸ್ಟೇಬಲ್ ಆನಂದ್ ಅವರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಗಾಂಜಾ ಸರಬರಾಜು ಮಾಡಲು ಬಂದಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಆನಂದ್ ಮತ್ತು ಒರಿಯಾ ಭಾಷೆ ಬಲ್ಲ ಜಿಗಣಿಯ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ದಾಖಲೆ ತೋರಿಸಿದರೂ ಒಡಿಶಾ ಪೊಲೀಸರು ನಂಬದೇ ವಶದಲ್ಲಿಟ್ಟುಕೊಂಡಿದ್ದಾರೆ.