ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಅಲರ್ಜಿ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ. ಅಲರ್ಜಿಯು ಸಾಮಾನ್ಯವಾಗಿ ಹಾನಿಕಾರಕವಲ್ಲದ ಪ್ರೋಟಿನ್ ಮತ್ತು ಇತರ ಪದಾರ್ಥಗಳ ವಿರುದ್ಧ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯ ವಿಪರೀತ ಪ್ರತಿಕ್ರಿಯೆಯಾಗಿದೆ.
ಯಕ್ತಿಯೋರ್ವ ಅಲರ್ಜಿನ್‌ಗೆ ಅಥವಾ ತನ್ನ ಶರೀರಕ್ಕೆ ಒಗ್ಗದ ಪದಾರ್ಥ ಅಥವಾ ವಸ್ತುವಿಗೆ ತೆರೆದುಕೊಂಡಾಗ ಅಲರ್ಜಿ ಉಂಟಾಗುತ್ತದೆ. ಶರೀರವು ಬಾಹ್ಯ ಪ್ರೋಟಿನ್‌ಗಳ ವಿರುದ್ಧ ಆ್ಯಂಟಿಬಾಡಿ ಅಥವಾ ರೋಗ ಪ್ರತೀಕಾರಕಗಳು ಎಂಬ ಕಣಗಳನ್ನು ಉತ್ಪಾದಿಸುತ್ತದೆ ಮತ್ತು ಈ ಪ್ರಕ್ರಿಯೆಯನ್ನು ನಿರೋಧಕ ಪ್ರತಿಕ್ರಿಯೆ ಎಂದು ಕರೆಯಲಾಗುತ್ತದೆ.
ವ್ಯಕ್ತಿಯು ಮತ್ತೆ ಮತ್ತೆ ಅಲರ್ಜಿನ್‌ಗೆ ಒಡ್ಡಿಕೊಂಡಾಗ ರೋಗ ನಿರೋಧಕ ವ್ಯವಸ್ಥೆಯು ಆ್ಯಂಟಿಬಾಡಿಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಮತ್ತು ಇದರ ಪರಿಣಾಮವಾಗಿ ಹಿಸ್ಟಾಮೈನ್‌ನಂತಹ ರಾಸಾಯನಿಕಗಳನ್ನು ಒಳಗೊಂಡಿರುವ ಮಾಸ್ಟ್ ಸೆಲ್‌ಗಳೆಂಬ ಕೋಶಗಳು ನಿಷ್ಕ್ರಿಯಗೊಳ್ಳುತ್ತವೆ. ಇದು ಶರೀರದಲ್ಲಿ ಅಲರ್ಜಿಗೆ ಕಾರಣವಾಗುತ್ತದೆ.
ಅಲರ್ಜಿಯಿಂದ ಬಳಲುತ್ತಿರುವಾಗ ಶರೀರದಲ್ಲಿ ವಿವಿಧ ಬಗೆಯ ಲಕ್ಷಣಗಳು ಕಂಡು ಬರುತ್ತವೆ. ಸೀನುವಿಕೆ, ಉಸಿರಾಟದಲ್ಲಿ ತೊಂದರೆ, ಉಬ್ಬಸ, ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುವುದು, ಸೈನಸ್ ನೋವು, ಕೆಮ್ಮು, ಚರ್ಮದಲ್ಲಿ ದದ್ದುಗಳು, ತುಟಿಗಳ ಊದುವಿಕೆ, ಕಣ್ಣು, ಕಿವಿ, ತುಟಿ ಮತ್ತು ಶರೀರದ ಇತರ ಭಾಗಗಳಲ್ಲಿ ತುರಿಕೆ ಇತ್ಯಾದಿಗಳು ಈ ಲಕ್ಷಣಗಳಲ್ಲಿ ಸೇರಿವೆ. ಅಲರ್ಜಿಯಲ್ಲಿ ಸಾಕಷ್ಟು ವಿಧಗಳಿವೆ.
ಋತುಮಾನದಲ್ಲಿ ಬದಲಾವಣೆಗಳು ಮತ್ತು ಜಾಗತಿಕ ತಾಪಮಾನ ಏರಿಕೆಯು ಈ ಅಲರ್ಜಿಗೆ ಕಾರಣವಾಗುತ್ತವೆ. ಹವಾಮಾನದಲ್ಲಿಯ ತೀವ್ರ ಬದಲಾವಣೆಗಳು ನಮ್ಮಲ್ಲಿ ಶಾರೀರಿಕ ಬದಲಾವಣೆಗಳನ್ನು ಉಂಟುಮಾಡುತ್ತವೆ.
ಮೂಗು ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುವ ಅಲರ್ಜಿಯನ್ನು ಸಾಮಾನ್ಯವಾಗಿ hay fever ಅಥವಾ ಅಲರ್ಜಿಕ್ ರಿನಿಟಿಸ್ ಎಂದು ಕರೆಯಲಾಗುತ್ತದೆ, ಇದು ದೀರ್ಘಕಾಲದ ಸಮಸ್ಯೆಯಾಗಿರಲಿದ್ದು, ದಿನಕ್ಕೆ 20 ಅಥವಾ 30 ಬಾರಿ ಸೀನುವಂತಹ ಪರಿಸ್ಥಿತಿ ಇರುತ್ತದೆ. ಈ ಅಲರ್ಜಿಯ ರೋಗಲಕ್ಷಣಗಳು ಸಾಮಾನ್ಯ ಶೀತದಂತೆಯೇ ಇರುತ್ತದೆ ಆದರೆ, ತೀವ್ರತರದ ಶೀತವಾಗಿರುವುದಿಲ್ಲ. hay fever ನಿಂದ ದೂರ ಉಳಿಯಬೇಕೆಂದರೆ ಹಣ್ಣು ಹಾಗೂ ಜ್ಯೂಸ್ ಗಳಿಂದ ಕೆಲ ದಿನಗಳ ಕಾಲ ದೂರವಿರಬೇಕಾಗುತ್ತದೆ. ಮತ್ತು ನಿಯಮಿತ ವ್ಯಾಯಾಮ ಮಾಡುವುದು ಅಗತ್ಯವಿರುತ್ತದೆ.
ಅಲರ್ಜಿಯಿಂದ ದೂರ ಉಳಿಯಲು ಆಯುರ್ವೇದದಲ್ಲಿ ಸರಳ ಚಿಕಿತ್ಸೆಗಳಿವೆ. ಪ್ರಾಚೀನವಾದ ವಿಧಾನವೆಂದರೆ ಜಲ ನೇತಿ ಅಥವಾ ಮೂಗಿನ ಡೌಚೆ (ಮೂಗು ತೊಳೆಯುವುದು). ಜಲ್ ನೇತಿ ಮೂಗಿನ ಮಾರ್ಗಗಳಿಂದ ಕೊಳಕು ಮತ್ತು ಬ್ಯಾಕ್ಟೀರಿಯಾವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ಸೋಂಕನ್ನು ತಡೆಯುತ್ತದೆ. ಉಸಿರಾಟದ ಮಾರ್ಗವನ್ನು ಸುಗಮಗೊಳಿಸುತ್ತದೆ. ರಕ್ತತ ಪರಿಚಲನೆಯನ್ನೂ ಸುಧಾರಿಸುತ್ತದೆ. ನಿದ್ರೆ ಕೂಡ ಉತ್ತಮವಾಗಿರುತ್ತದೆ.
ಈ ವಿಧಾನವನ್ನು ಅನುಸರಿಸಲು ನೀವು 10 ನಿಮಿಷಗಳನ್ನು ವ್ಯಯಿಸಬೇಕಾಗುತ್ತದೆ. ಇದನ್ನು ಅನುಸರಿಸಿದ್ದೇ ಆದರೆ, ಜಲ್ ನೇತಿ ಮಾಡಲು ನಿಮ್ಮ ದಿನದಲ್ಲಿ ಹತ್ತು ನಿಮಿಷಗಳನ್ನು ತೆಗೆದುಕೊಳ್ಳಿ ಮತ್ತು ನೀವು ಜೀವನದುದ್ದಕ್ಕೂ ಸೈನಸೈಟಿಸ್, hay fever ನಿಂದ ಮುಕ್ತರಾಗಬಹುದು. ಈ ವಿಧಾನವು ಮೈಗ್ರೇನ್ ಮತ್ತು ಅಸ್ತಮಾ ರೋಗಲಕ್ಷಣಗಳನ್ನೂ ಕೂಡ ದೂರ ಇಡುತ್ತದೆ.
ಕೆಲವರಿಗೆ ಕೆಲವು ಆಹಾರ ತಿಂದರೆ ದೇಹಕ್ಕೆ ಆಗಿ ಬರುವುದಿಲ್ಲ. ಫುಡ್ ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆಯಂಥ ಸಮಸ್ಯೆ ಕಾಡುತ್ತದೆ. ಇಂತಹವರು ಆಲ್ಕೋಹಾಲ್, ಸಕ್ಕರೆ, ಸಂಸ್ಕರಿಸಿದ ಆಹಾರ, ಧಾನ್ಯ, ತಂಬಾಕು, ಫ್ಲೇವರ್ ಆ್ಯಡೆಡ್ ಫುಡ್ ಗಳು, ರಸಾಯನಿಕ ಯುಕ್ತ ಆಹಾರಗಳಿಂದ ದೂರ ಉಳಿಯುವುದು ಉತ್ತಮ.
ಫುಡ್ ಅಲರ್ಜಿಯಿಂದ ಬಳಲುತ್ತಿರುವರು ವಿಟಮಿನ್ ಸಿ ಮತ್ತು ಇ ಯುಕ್ತ ಆಹಾರಗಳನ್ನು ಸೇವಿಸಬೇಕಾಗುತ್ತದೆ. ವಿಟಮಿನ್ ಸಿ ಮತ್ತು ಇ ಫುಡ್ ಅಲರ್ಜಿಗಳನ್ನು ದೂರ ಇಡುತ್ತದೆ. ಬೆಳಿಗ್ಗೆ ಖಾಲೆ ಹೊಟ್ಟೆಯಲ್ಲಿ ನೀರಿನಲ್ಲಿ 5 ಹನಿ ಕ್ಯಾಸ್ಟರ್ ಆಯಿಲ್ ಸೇರಿಸಿ ಕುಡಿಯುವುದರಿಂದ ಚರ್ಮ ಮತ್ತು ಮೂಗಿನ ಮಾರ್ಗಗಳಲ್ಲಿನ ಅರ್ಜಿಯನ್ನು ಇದು ತಡೆಯುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ದೇಹದಲ್ಲಿನ ಅಲರ್ಜಿಗಳಿಗೆ ಒತ್ತಡ ಕೂಡ ಪ್ರಮುಖ ನಿರ್ವಹಿಸುತ್ತದೆ. ಮನಸ್ಸು ಸಮಾಧಾನವಿಲ್ಲವೆಂದಾಗ ಹಲವಾರು ಆಲೋಚಗಳು ಕಾಡಲು ಶುರುವಾಗುತ್ತದೆ. ಇದರಿಂದ ಮನುಷ್ಯ ಒತ್ತಡಕ್ಕೊಳಗಾಗುತ್ತಾನೆ. ಇದು ಅಲರ್ಜಿಗೆ ಆಹ್ವಾನ ನೀಡಿದಂತಾಗುತ್ತದೆ. ಹೀಗಾಗಿ ವಿಶ್ರಾಂತಿ ಪಡೆದು ಒತ್ತಡಗಳಿಂದ ದೂರವಿರಿ. ಇದರಿಂದ ಜೀವನದ ಗುಣಮಟ್ಟ ಸುಧಾರಿಸುತ್ತದೆ.