ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ವಿರುದ್ಧದ ಅನೈಸರ್ಗಿಕ ಲೈಂಗಿಕ ಕ್ರಿಯೆ ಎಸಗಿದ ಆರೋಪ ಸಂಬಂಧ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಸೂರಜ್ ರೇವಣ್ಣ ರನ್ನು ರವಿವಾರ ಬಂಧಿಸಿದ್ದಾರೆ.
ದೂರು ನೀಡಿದ ಬೆನ್ನಲ್ಲೇ ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಶನಿವಾರ ರಾತ್ರಿ ಹಾಸನದ ಸಿಇಎನ್ ಠಾಣೆಯಲ್ಲಿ ವಿಚಾರಣೆ ನಡೆಸಿ ನಿಗೂಢ ಸ್ಥಳಕ್ಕೆ ಕರೆದೊಯ್ದಿದ್ದರು
ಏನಿದು ಪ್ರಕರಣ?:
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಚನ್ನರಾಯಪಟ್ಟಣ ತಾಲೂಕು ಗನ್ನಿಕಡ ಬಳಿ ಇರುವ ತೋಟದ ಮನೆಗೆ ಜೂ.16ರಂದು ನನ್ನನ್ನು ಕರೆಸಿಕೊಂಡು ನನ್ನ ಮೇಲೆ ಅನೈಸರ್ಗಿಕವಾಗಿ ಲೈಂಗಿಕ ಸಂಭೋಗ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಸೂರಜ್ ರೇವಣ್ಣ ಮತ್ತು ಹನುಮನಹಳ್ಳಿಯ ಶಿವಕುಮಾರ್ ಎಂಬವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ಅವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೊಳೆನರಸೀಪುರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅರಕಲಗೂಡು ತಾಲೂಕಿನ ಹಳ್ಳಿಯೊಂದರ ಸಂತ್ರಸ್ತ ಯುವಕ ಮನವಿ ಮಾಡಿದ್ದಾನೆ. ಆ ದೂರಿನ ಪ್ರತಿಯು ಹಾಸನ ಎಸ್ಪಿಗೂ ಮೇಲ್ ಮೂಲಕ ತಲುಪಿತ್ತು. ಜೊತೆಗೆ ಸಿಎಂ, ಡಿಸಿಎಂ, ಗೃಹ ಸಚಿವರಿಗೂ ದೂರು ಪ್ರತಿಯನ್ನು ರವಾನಿಸಿದ್ದ ಎನ್ನಲಾಗಿದೆ. ಹಾಸನ ಎಸ್ಪಿ ಕಚೇರಿಗೆ ಬಂದ ದೂರನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
ದೂರುದಾರ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲು ರವಿವಾರ ಸೂರಜ್ ರೇವಣ್ಣ ಹಾಸನದ ಸೆನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪೊಲೀಸರು ಸೂರಜ್ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡು ಮುಂಜಾನೆ 4 ಗಂಟೆಯವರೆಗೆ ಸೂರಜ್ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಸೂರಜ್ ರೇವಣ್ಣನನ್ನು ಬಂಧಿಸಿದರು. ವಿಚಾರಣೆಗಾಗಿ ಸರ್ಕಾರ ಸಕಲೇಶಪುರ ಡಿವೈಎಸ್ಪಿ ನೇಮಿಸಿದ್ದಾರೆ
ಸೂರಜ್ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂತ್ರಸ್ತನ ವಿರುದ್ಧವೇ ಹೊಳೆನರಸೀಪುರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 384, 506ರ ಅಡಿಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಾಗಿದೆ. ಯುವಕ ಸುಳ್ಳು ಆರೋಪ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ನಂತರ 3, ಬಳಿಕ 2 ಕೋಟಿಗೆ ಬಂದ. ಆದರೆ ನಾನೇನು ತಪ್ಪು ಮಾಡಿಲ್ಲ, ನಾನೇಕೆ ಹಣ ಕೊಡಬೇಕು ಎಂದು ಸೂರಜ್ ಅವರು ನಿರಾಕರಿಸಿದಾಗ ಆತ ದೂರು ನೀಡಿದ್ದಾನೆ ಎಂದು ಸೂರಜ್ ಬ್ರಿಗೇಡ್ ಖಜಾಂಚಿ ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ