ಅಮರಾವತಿ: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಅವರು ದಿಢೀರನೇ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೌದು. ಪವನ್ ಕಲ್ಯಾಣ್ ಅವರು ಕಳೆದ ಎರಡು ದಿನಗಳಿಂದ ವೈರಲ್ ಜ್ವರದಿಂದ ಬಳಲುತ್ತಿದ್ದರು. ಜ್ವರದ ಜತೆಗೆ ತೀವ್ರ ಕೆಮ್ಮಿನಿಂದ ಬಳಲುತ್ತಿದ್ದಾರೆ. ಆದರೆ, ತೀವ್ರ ಅನಾರೋಗ್ಯದ ನಡುವೆಯೂ ತಮ್ಮ ನಿವಾಸದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಕಮಿಷನರೇಟ್ ಅಧಿಕಾರಿಗಳನ್ನು ಭೇಟಿ ಮಾಡಿದರು. ಈ ಸಂಬಂಧ ಮಾತನಾಡಿರುವ ಪವನ್ ಕಲ್ಯಾಣ್, ‘ಪ್ರವಾಹ ಪರಿಸ್ಥಿತಿ ಅವಲೋಕಿಸಲಾಯಿತು. ಪ್ರವಾಹದ ನೀರು ಇಳಿಮುಖವಾಗಿರುವ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಚುರುಕುಗೊಳಿಸಿ ಸೂಪರ್ ಕ್ಲೋರಿನೇಷನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಸೊಳ್ಳೆಗಳ ಹಾವಳಿ ತೀವ್ರವಾಗಿರುವ ಕಾರಣ ನೈರ್ಮಲ್ಯ ನಿರ್ವಹಣೆಯನ್ನು ತೀವ್ರವಾಗಿ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸ್ಪಷ್ಟಪಡಿಸಿದರು. ಶುದ್ಧ ಕುಡಿಯುವ ನೀರು ಪೂರೈಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಏಲೂರು ಜಲಾಶಯಕ್ಕೆ ಬರದ ಭೀತಿಯ ಕುರಿತು ವಿಚಾರಿಸಿದರು. ಶ್ರೀಕಾಕುಳಂ, ಮಾನ್ಯಂ, ವಿಜಯನಗರ, ಅಲ್ಲೂರಿ, ವಿಶಾಖ, ಕಾಕಿನಾಡ, ಏಲೂರು, ಎನ್‌ಟಿಆರ್, ಕೃಷ್ಣಾ ಅನಕಾಪಲ್ಲಿ ಮತ್ತು ಅಂಬೇಡ್ಕರ್ ಗೋದಾವರಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.