ವಿಜಯವಾಡ : ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಎನ್.ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನವನ್ನು ಸ್ವೀಕರಿಸಿದರು. ವಿಜಯವಾಡದ ಕೆಸರಪಲ್ಲಿ ಐಟಿ ಪಾರ್ಕ್ ನಲ್ಲಿ ಏರ್ಪಡಿಸಲಾಗಿದ್ದ ಪ್ರಮಾಣ ವಚನ ಸಮಾರಂಭದಲ್ಲಿ ಎನ್.ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಆಂಧ್ರದ ಸಿಎಂ ಆಗಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಡಿಸಿಎಂ ಆಗಿ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಎಸ್.ಅಬ್ಲುಲ್ ನಜೀರ್ ಅವರು ಪ್ರಮಾಣದ ಗೌಪ್ಯತೆಯನ್ನು ಬೋಧಿಸಿದರು. ಎನ್ ಡಿಎ ಅಂಗಪಕ್ಷದ ಸದಸ್ಯರಲ್ಲೊಬ್ಬರಾದ ಟಿಡಿಪಿಯ ಮುಖ್ಯಸ್ಥ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿಶ್ ಶಾ ಅವರು ಖುದ್ದಾಗಿ ಹಾಜರಾಗಿದ್ದುದು ವಿಶೇಷವಾಗಿತ್ತು. 2024 ರ ಲೋಕಸಭೆ ಚುನಾವಣೆಯ ವೇಳೆಯೇ ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳಿಗೂ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಟಿಡಿಪಿ135 ಸೀಟ್ ಗಳನ್ನು ಗೆಲ್ಲುವುದರೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಇನ್ನುಳಿದಂತೆ ಎನ್ ಡಿಎ ಮಿತ್ರ ಪಕ್ಷಗಳಾದ ಪವನ್ ಕಲ್ಯಾಣ್ ಅವರ ಜನಸೇನಾ 21, ಚಂದ್ರಬಾಬು ನಾಯ್ಡು ಅವರ ಪತ್ನಿಯ ಸಹೋದರಿ ಪುರಂದೇಶ್ವರಿ ಆಂಧ್ರಪ್ರದೇಶದ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿ ಪಕ್ಷ 8 ಸೀಟ್ ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಇನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಪಿ ಕೇವಲ 11 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕಳಪೆ ಸಾಧನೆ ತೋರಿತ್ತು. 1995 ರಿಂದ 1999, 2004 ರಿಂದ 2009 ಹಾಗೂ 2014 ರಿಂದ 2019 ರ ವರೆಗೆ ಅಂದರೆ ಮೂರು ಅವಧಿಯವರೆಗೆ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಸಿಎಂ ಆಗಿ ಆಡಳಿತ ನಡೆಸಿದ ಅನುಭವ ಉಳ್ಳವರಾಗಿದ್ದು, ಸದ್ಯ ನಾಲ್ಕನೇ ಬಾರಿಗೆ ಮತ್ತೊಮ್ಮೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿದೆ. ಇತ್ತೀಚಿಗೆ ನಡೆದ ಲೋಕಸಭೆ ಚುನಾವಣೆಯ ವೇಳೆ ಆಂಧ್ರಪ್ರದೇಶದ 25 ಸ್ಥಾನಗಳ ಪೈಕಿ ಟಿಡಿಪಿ 16 ರಲ್ಲಿ ಗೆದ್ದ ಪರಿಣಾಮ ಕಾಂಗ್ರೆಸ್ ನೇತೃತ್ವದ “ಇಂಡಿಯಾ” ಒಕ್ಕೂಟದವರು ತಮ್ಮ ಬಣಕ್ಕೆ ಬಂದರೆ ನಾಯ್ಡುಗೆ ಪ್ರಧಾನಿ ಹುದ್ದೆ ಕೊಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರೂ ಕೂಡ ಅದಕ್ಕೆ ಕಿವಿಗೊಡದ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿಯವರಿಗೆ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದರು.