ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಎನ್ ಚಂದ್ರಬಾಬು ನಾಯ್ಡು ನೇತೃತ್ವದ 25 ಸದಸ್ಯರ ಮಂತ್ರಿಮಂಡಲ ಇಂದು ಪ್ರಮಾಣವಚನ ಸ್ವೀಕರಿಸಲಿದೆ.
ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಜನಸೇನಾ ಪಕ್ಷದ ಅಧ್ಯಕ್ಷ ನಟ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಬೆಳಿಗ್ಗೆ ಬಿಡುಗಡೆಯಾದ 24 ಮಂತ್ರಿಗಳ ಪಟ್ಟಿಯಲ್ಲಿ ಜನಸೇನಾ ಪಕ್ಷದ ಮೂವರು ಮತ್ತು ಬಿಜೆಪಿಯ ಒಬ್ಬರು ಸೇರಿದ್ದಾರೆ. ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಚಿವರ ಪಟ್ಟಿಯನ್ನು ರಾಜ್ಯಪಾಲ ಎಸ್ ಅಬ್ದುಲ್ ನಜೀರ್ ಅವರಿಗೆ ಕಳುಹಿಸಿದ್ದಾರೆ.
ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯಪಾಲರು ನಾಯ್ಡು ಮತ್ತು ಸಚಿವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ.ಅಚ್ಚಣ್ಣನಾಯ್ಡು ಮತ್ತು ಜನಸೇನಾ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಸಂಪುಟದಲ್ಲಿ ಸೇರಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಇತರ ಕೇಂದ್ರ ಸಚಿವರು, ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಮತ್ತು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.