ದಾವಣಗೆರೆ :ಎಲ್ಲಾ ಸಮಸ್ಯೆಗಳಿಗೂ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಮುಕ್ತ ಮನಸಿನಿಂದ ಚರ್ಚೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆತ್ಮಹತ್ಯೆ ಅಲೋಚನೆಯಿಂದ ಹೊರಬಾರಬಹುದೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ವರಿ ಎನ್ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಮನೋವೈದ್ಯಕೀಯ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸೆ.11 ರಂದು ಜಿಲ್ಲಾ ಕಾರಾಗೃಹ ಇಲಾಖೆಯ ಸಭಾಂಗಣದಲ್ಲಿ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಕ್ರಿಯೆಯ ಮೂಲಕ ಭರವಸೆಯನ್ನು ಮೂಡಿಸೋಣ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿ,
2003 ರಿಂದ ವಿಶ್ವ ಸಂಸ್ಥೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಸ್ತುತ ದಿನ ಮಾನಗಳಲ್ಲಿ ವಿವಿಧ ಒತ್ತಡಗಳ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ವಿಷಾದನೀಯ. ಆತ್ಮಹತ್ಯೆಗೆ ಶರಣಾಗುವುದು ಮಹಾಪಾಪ, ಏನೇ ಇದ್ದರೂ ಕೂಡ ಎದುರಿಸಿ ಹೋರಾಡಿ ಗೆಲ್ಲಬೇಕು. ನಮ್ಮನ್ನು ನಂಬಿಕೊಂಡು ಕುಟುಂಬಸ್ಥರು ಇರುತ್ತಾರೆ. ಅವರ ಬಗ್ಗೆಯಾದರು ಒಮ್ಮೆ ಯೋಚನೆ ಮಾಡಬೇಕು, ಆಗಲಾದರೂ ಮನಸ್ಸು ಬದಲಾಗುತ್ತದೆ. ಒತ್ತಡದಿಂದ ಮುಕ್ತರಾಗಲು ಧ್ಯಾನ, ಯೋಗ ಪ್ರಾಣಯಾಮ ಮಾಡಿದರೆ ಸಹಾಯಕವಾಗುತ್ತದೆ ಎಂದು ಸಲಹೆ ನೀಡಿದರು. ಜಿಲ್ಲೆಯಾದ್ಯಂತ ಮನೋವೈದ್ಯರ ತಂಡವು ಮಾನಸಿಕ ಆರೋಗ್ಯ ಶಿಬಿರವನ್ನು ಏರ್ಪಡಿಸಿ, ಅಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ, ಆಪ್ತಸಮಾಲೋಚನೆ, ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ, ಕರೆಣ್ಣವರ ಮಾತನಾಡಿ. ಆತ್ಮಹತ್ಯೆ ಎಂಬುದು ಸ್ವಂತಕ್ಕೆ ಮಾಡಿಕೊಳ್ಳುವ ಮಹಾ ಮೋಸ. ಆತ್ಮಹತ್ಯೆಗಳನ್ನು ತಡೆಗಟ್ಟಲು ನಾವು ಆಧ್ಯಾತ್ಮ ಚಟುವಟಿಕೆಗಳ ಕಡೆಗೆ ಒಲವು ತೋರುವುದು ಅತ್ಯವಶ್ಯಕವಾಗಿದೆ. ಹಿರಿಯರ ನುಡಿಗಳು, ಪುರಾಣಗಳು, ಧ್ಯಾನ, ಯೋಗದಿಂದ ಮನುಷ್ಯರು ಸಿಟ್ಟು, ಚಂಚಲತೆ ಹಾಗೂ ಗೊಂದಲಗಳಿಂದ ಹೊರಬರಲು ಮತ್ತು ಮನಸ್ಸನ್ನು ಶಾಂತಯುತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಸೃಷ್ಠಿಯಲ್ಲಿ ಕೋಟ್ಯಾಂತರ ಜೀವಿಗಳಿವೆ ಪ್ರತಿಯೊಂದು ಜೀವಿಯು ಹುಟ್ಟಿದ ಮೇಲೆ ತನ್ನದೇ ಆದ ಕರ್ತವ್ಯವನ್ನು ನಿರ್ವಹಿಸುತ್ತವೆ, ಅದೇ ರೀತಿಯಾಗಿ ಮನುಷ್ಯ ಇತರೆ ಜೀವಿಗಳಿಗಿಂತ ಹೆಚ್ಚು ಆಲೋಚಿಸುವ, ಸರಿ, ತಪ್ಪು ತಿಳಿದುಕೊಳ್ಳುವ ವಿಶಿಷ್ಟವಾದ ಶಕ್ತಿಯನ್ನು ಪಡೆದುಕೊದ್ದಾನೆ,. ಆದ್ದರಿಂದ ಜೀವನದಲ್ಲಿ ತನ್ನ ಕರ್ತವ್ಯವೇನು ಎಂಬುದನ್ನು ಅರಿತು ಬದುಕಬೇಕು, ಸಮಜದಲ್ಲಿ ಸುಧಾರಣೆ ತರುವಂತಹ ಕೆಲಸವನ್ನು ಮಾಡಬೇಕು.
ಬಂಧಿ ಖಾನೆಯಲ್ಲಿರುವವರು ತಮ್ಮ ಮುಂದಿನ ಭವಿಷ್ಯದ ಕುರಿತು ಯೋಚಿಸಬೇಕು, ತಂದೆ ತಾಯಿ ಅಥವಾ ಕುಟುಂಬದವರು ನಮ್ಮನ್ನು ಬೆಳೆಸಲು ಎಷ್ಟು ಕಷ್ಟ ಪಟ್ಟಿರುತ್ತಾರೆ ಈ ನಿಟ್ಟಿನಲ್ಲಿ ಅವರ ನೋವುಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟು ಆತ್ಮಹತ್ಯೆಗೆ ಪ್ರಯತ್ನಿಸಬಾರದು ಎಂದರು.
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ ಮಂಜುನಾಥ ಎಲ್ ಪಾಟೀಲ್. ಮಾತನಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಿಂದ ತಾಲ್ಲೂಕುವಾರು ಮನೋಚೈತನ್ಯ ಕಾರ್ಯಕ್ರಮ ರೂಪಿಸಿ ಜಿಲ್ಲೆಯಲ್ಲಿ ಒತ್ತಡ ಮುಕ್ತರಾಗಿಸಲು ಎಲ್ಲಾ ಇಲಾಖೆ ಸೇರಿದಂತೆ ಸಮುದಾಯದ ಜನರಿಗೆ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ.
ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಭಾಗೀರಥಿ.ಎಲ್, ಜೆ.ಜೆ.ಎಂ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕರು ಮತ್ತು ಪೂರ್ವ ಮುಖ್ಯಸ್ಥರಾದ ಡಾ.ಕೆ.ನಾಗರಾಜ್ ರಾವ್ ಹಾಗೂ ಕಾರಾಗೃಹದ ಪೊಲೀಸ್ ಸಿಬ್ಬಂದಿಗಳು ಉಪಸ್ಥತಿರಿರುವರು.