ಕೊಡಗು: ಮನೆಯ ಅಂಗಳದಲ್ಲಿ ಆನೆಯೊಂದು ಮರಿಯಾನೆಗೆ ಜನ್ಮನೀಡಿದ್ದು, ಜನರು ಬರುತ್ತಿದ್ದಂತೆಯೇ ಭಯಗೊಂಡು ಕಾಡಾನೆ ಮರಿ ಆನೆಯನ್ನು ಬಿಟ್ಟು ಹೊಗಿತ್ತು. ಆದರೆ ಈಗ ಆನೆ ಮರಿಯನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ತಾಯಿ ಆನೆಯನ್ನು ಹುಡುಕಲು ಅರಣ್ಯ ಇಲಾಖೆ ಸಿಬ್ಬಂದಿ ಮರಿ ಆನೆಯನ್ನು ಜೀಪಿನ ಮೂಲಕ ಕಾಡಿಗೆ ಕರೆದುಕೊಂಡು ಹೋಗಿದ್ದರು. ಏಳು ಕಿ.ಮೀ ವರೆಗೆ ಹುಡುಕಾಟದ ನಂತರ ತಾಯಿ ಆನೆ ಪತ್ತೆಯಾಗಿದೆ. ಅಲ್ಲಿಯವರೆಗೆ ಮರಿ ಆನೆಗೆ ಗ್ಲೂಕೋಸ್ ನೀಡಿ ಅರಣ್ಯ ಸಿಬ್ಬಂದಿ ಹಾರೈಕೆ ಮಾಡಿದ್ದಾರೆ. ಅಲ್ಲದೆ ತಾಯಿ-ಮಗುವನ್ನು ಒಂದು ಮಾಡುವ ಈ ಕಾರ್ಯಾಚರಣೆಗೆ ಸ್ಥಳೀಯರು ಕೂಡ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಆರ್‌ಎಫ್‌ಒ ದೇವಯ್ಯ ಮಾತನಾಡಿ, ತಾಯಿ ಆನೆ ಮರಿ ಬಿಟ್ಟು ಹೋದ ಘಟನೆ ಅಪರೂಪ ಎಂದರು. ಇದೇ ವೇಳೆ ಸ್ಥಳೀಯರು ಮಾಡಿದ ಸಹಾಯವನ್ನು ನೆನಪಿಸಿಕೊಂಡರು, ವಿಶೇಷವಾಗಿ ಪಿ ಸೋಮೇಶ್ ಎಂಬವರ ಸಹಾಯವನ್ನು ನೆನಪಿಸಿಕೊಂಡರು. ಗ್ರಾಮದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಲು ಕಾಡಿನ ಪ್ರದೇಶಗಳ ಮಾರ್ಗವನ್ನು ಜನವಸತಿ ಪ್ರದೇಶಗಳಿಗೆ ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.