ಬೆಂಗಳೂರು: ಹಣದು ಮಂಗಳೂರು ನಗರದ ಕಾಲೇಜೊಂದರ ನಿವೃತ್ತ ಪ್ರಾಂಶುಪಾಲರಾಗಿರುವ ಮಹಿಳೆಯೊಬ್ಬರು ಸೇವಾ ನಿವೃತ್ತಿಯಿಂದ ಬಂದ ₹72.87 ಲಕ್ಷವನ್ನು ಕಳೆದುಕೊಂಡಿದ್ದು, ಈ ಬಗ್ಗೆ ಇಲ್ಲಿನ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಟರಿಯ ಹಣ ಬರಲಿದೆ’ ಎಂಬ ಆನ್ಲೈನ್ ವಂಚಕರ ಬಣ್ಣದ ಮಾತುಗಳನ್ನು ನಂಬಿದ ಮಹಿಳೆ, ತಮ್ಮ ಬ್ಯಾಂಕ್ ಖಾತೆಗಳಿಗೆ ಅಪರಿಚಿತರು ಕಳುಹಿಸಿದ್ದ ಮೊಬೈಲ್ ಸಂಖ್ಯೆಗಳನ್ನು ಜೋಡಿಸಿದ್ದು, ಅದರಿಂದಾಗಿಯೇ ಅವರು ಆನ್ಲೈನ್ ವಂಚನೆಗೆ ಒಳಗಾಗಿದ್ದಾರೆ.!
ವಾಟ್ಸ್ ಆ್ಯಪ್ ಮೂಲಕ ಅಪರಿಚಿತ ವ್ಯಕ್ತಿಗಳು ತಮ್ಮನ್ನು ಸತ್ಯಂ ಪಾಂಡೆ ಮತ್ತು ಮಿತ್ತಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡು ನಿರಂತರ ಸಂಪರ್ಕದಲ್ಲಿದ್ದರು. ಅತ್ಯಂತ ಆತ್ಮೀಯವಾಗಿ ಮಾತನಾಡಿಕೊಂಡಿದ್ದರು. ‘ನಿಮಗೆ ಲಾಟರಿ ಹಣ ಬಂದಿದೆ. ಅದನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ’ ಎಂದು ಅವರು ನಂಬಿಸಿದ್ದರು. ಅವರ ಮಾತುಗಳನ್ನು ನಂಬಿದ್ದ ನಾನು, ಅವರು ಕಳುಹಿಸಿದ್ದ ಮೊಬೈಲ್ ಸಂಖ್ಯೆಗಳನ್ನು ನನ್ನ ಎರಡು ಬ್ಯಾಂಕ್ ಖಾತೆಗಳಿಗೆ ಜೋಡಿಸಿದ್ದೆ. ಇದಾದ ನಂತರ ನನ್ನ ಸೇವಾ ನಿವೃತ್ತಿಯಿಂದ ಬರಬೇಕಾದ ₹50,55,118 ಮೊತ್ತವು ಅ.26ರಂದು ಒಂದು ಬ್ಯಾಂಕ್ ಖಾತೆಗೆ ಹಾಗೂ ₹22,31,798 ಮೊತ್ತವು ಇನ್ನೊಂದು ಬ್ಯಾಂಕ್ ಅ.31ರಂದು ಖಾತೆಗೆ ಜಮೆ ಆಗಿತ್ತು. ಈ ಎರಡೂ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು ₹72,86,916 ಅನ್ನು ಈ ಅಪರಿಚಿತ ವ್ಯಕ್ತಿಗಳು ಸೇರಿ ನನಗೆ ಗಮನಕ್ಕೆ ತಾರದೆಯೇ ಅನಧಿಕೃತವಾಗಿ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ವಂಚನೆಗೆ ಒಳಗಾದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.