ಭಾರತೀಯ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO)ಯೂ ಆಲಿವ್ ರಿಡ್ಲಿ ಸಮುದ್ರ ಆಮೆಗಳಿಗಾಗಿ ವ್ಹೀಲರ್ ದ್ವೀಪದಲ್ಲಿ ಕ್ಷಿಪಣಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.!
ಆಲಿವ್ ರಿಡ್ಲಿ ಅಳಿವಿನಂಚಿನಲ್ಲಿರುವ ಪ್ರಬೇಧದ ಸಮುದ್ರ ಆಮೆಯಾಗಿದ್ದು, ಇವುಗಳ ಉಳಿವಿಗಾಗಿ ಈ ಋತುವಿನಲ್ಲಿ ಒಡಿಶಾ ಕರಾವಳಿಯ ವ್ಹೀಲರ್ ದ್ವೀಪದಲ್ಲಿ ಕ್ಷಿಪಣಿ ಪರೀಕ್ಷೆಗೆ ವಿರಾಮ ನೀಡಲು ಡಿಆರ್ಡಿಒ ತೀರ್ಮಾನಿಸಿದೆ.
ಇದಕ್ಕಾಗಿ ಜನವರಿಯಿಂದ ಮಾರ್ಚ್‌ವರೆಗೆ ಒಡಿಶಾ ಕರಾವಳಿಯ ವೀಲರ್ ದ್ವೀಪದಲ್ಲಿ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಕ್ಷಿಪಣಿ ಪರೀಕ್ಷೆಗೆ ಅಲ್ಪವಧಿಯ ಮಟ್ಟಿಗೆ ವಿರಾಮ ನೀಡಿದೆ. ಈ ಋತು ಆಲಿವ್ ರಿಡ್ಲಿ ಸಮುದ್ರ ಆಮೆಗಳು ಸಾಮೂಹಿಕ ಗೂಡುಕಟ್ಟುವ ಅವಧಿಯಾದ ಕಾರಣ ಈ ನಿರ್ಧಾರತೆಗೆದುಕೊಳ್ಳಲಾಗಿದೆ.
ಕ್ಷಿಪಣಿ ಪರೀಕ್ಷೆ, ಯಾಂತ್ರೀಕೃತ ದೋಣಿಗಳು ಮತ್ತು ಜನರ ಚಲನೆಯು ಸಮುದ್ರ ಆಮೆಗಳ ಸಾಮೂಹಿಕ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಆಮೆಗಳು ಮೊಟ್ಟೆಗಳನ್ನು ಇಡುವ ಕೊಲ್ಲಿಗಳು ಮತ್ತು ನದಿಗಳ ಬಳಿಯಿರುವ ಮರಳಿನ ಕಿರಿದಾದ ಪಟ್ಟಿಗಳ ಹತ್ತಿರ ಟ್ರಾಲರ್‌ಗಳು ಮತ್ತು ಮೀನುಗಾರಿಕಾ ದೋಣಿಗಳು ಸಾಗದಂತೆ ಮಾಡಲು ಅಮೆಗಳ ರಕ್ಷಣೆಗೆ ಸೇನೆ ಮತ್ತು ಕೋಸ್ಟ್ ಗಾರ್ಡ್ ಕರಾವಳಿಯಲ್ಲಿ ಗಸ್ತು ತಿರುಗುತ್ತದೆ.
ಆಮೆ ಸಂತನೋತ್ಪತ್ತಿ ಸ್ಥಳವು ವೀಲರ್ ದ್ವೀಪಕ್ಕೆ ಸಮೀಪದಲ್ಲಿದೆ. ಕ್ಷಿಪಣಿ ಪರೀಕ್ಷೆಯು ಬಲವಾದ ಬೆಳಕು ಮತ್ತು ಗುಡುಗು ಸದ್ದಿನ ಹೊಳಪನ್ನು ಒಳಗೊಂಡಿರುವುದರಿಂದ, ಆಮೆಗಳಿ ಇದರಿಂದ ವಿಚಲಿತಗೊಳ್ಳುವ ಸಾಧ್ಯತೆ ಇದೆ.
ಸುಮಾರು 6.6 ಲಕ್ಷ (0.6 ಮಿಲಿಯನ್) ಸಮುದ್ರ ಆಮೆಗಳು ಗಂಜಾಂ ಜಿಲ್ಲೆಯಲ್ಲಿರುವ ರುಶಿಕುಲ್ಯ ರೂಕೆರಿಯಲ್ಲಿ ಗೂಡುಕಟ್ಟಿವೆ. ಇದಕ್ಕಾಗಿ ಒಡಿಶಾ ಸರ್ಕಾರವು ಈಗಾಗಲೇ ನವೆಂಬರ್ 1 ರಿಂದ ಮೇ 31 ರವರೆಗೆ ಒಡಿಶಾ ಕರಾವಳಿಯ ಭಾಗದಾದ್ಯಂತ ಮೀನುಗಾರಿಕೆಯನ್ನು ನಿಷೇಧಿಸಿದೆ.
ಸಣ್ಣ ಆಮೆಗಳನ್ನು ಆಹಾರಕ್ಕಾಗಿ ಮತ್ತು ಅವುಗಳ ಎಣ್ಣೆಗಾಗಿ ಬೇಟೆಯಾಡುತ್ತಾರೆ. ಮರಳಿನ ಮೇಲೆ ಮರಿಯಾಗದ ಮೊಟ್ಟೆಗಳು ಮತ್ತು ಚಿಪ್ಪುಗಳನ್ನು ಗೊಬ್ಬರಗಳಾಗಿ ಬಳಸುತ್ತಾರೆ. ಹೀಗಾಗಿ ಅವುಗಳ ಸಂತತಿ ಕ್ಷೀಣಿಸಿದೆ. ಹೀಗಾಗಿ ಇಂತಹ ವಿಶಿಷ್ಟ ಪ್ರಭೇದಗಳ ರಕ್ಷಣೆಗೆ ಭಾರತದ ಪ್ರಮುಖ ಮಿಲಿಟರಿ ಸಂಶೋಧನಾ ಸಂಸ್ಥೆ ಕೂಡ ಮುಂದಾಗಿದೆ