ಬೆಂಗಳೂರು: ಆರ್‌ಎಸ್‌ಎಸ್‌ಗೂ ರಾಮಮಂದಿರಕ್ಕೂ ಏನೂ ಸಂಬಂಧವಿಲ್ಲ. ಆದರೆ ಬಿಜೆಪಿ, ಆರ್‌ಎಸ್ಎಸ್‌ನವರನ್ನು ಬಳಸಿಕೊಂಡು ಮನೆ, ಮನೆಗೆ ತೆರಳಿ, ಅಕ್ಷತೆ ಕೊಟ್ಟು ಇಲ್ಲಿಂದಲೇ ರಾಮಮಂದಿರಕ್ಕೆ ನಮನ ಸಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ 139 ನೇ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು,ಪ್ರತಿಯೊಂದು ಕುಟುಂಬದ ಹೆಣ್ಣುಮಕ್ಕಳು ನಮ್ಮ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕಾರಣದಲ್ಲಿ ಇಂತಹ ಅವಕಾಶ, ಭಾಗ್ಯ ದೊರಕಿರಲಿಲ್ಲ. ನುಡಿದಂತೆ ನಡೆದಿದ್ದೇವೆ, ಇದನ್ನು ಕಾರ್ಯಕರ್ತರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಹಣದುಬ್ಬರದ ಹೊತ್ತಿನಲ್ಲಿ ಐದು ಗ್ಯಾರಂಟಿಗಳನ್ನು ಕೊಟ್ಟು ಯಶಸ್ವಿಯಾಗಿದ್ದೇವೆ. ಕಾಂಗ್ರೆಸ್ ಚಿಹ್ನೆ ಹಸ್ತದಲ್ಲಿ ಇರುವ ಐದು ಬೆರಳಿನಂತೆ, ಚುನಾವಣೆಯಲ್ಲಿ ಐದು ಗ್ಯಾರಂಟಿಗಳು ಇರಬೇಕು ಎಂದು ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ತೀರ್ಮಾನ ಮಾಡಲಾಯಿತು. ಬರುವ ಜ.10 ರಂದು ಕೇಂದ್ರ ನಾಯಕರು ಹಾಗೂ ರಾಜ್ಯದ ಎಲ್ಲ ಶಾಸಕರನ್ನು ಒಳಗೊಂಡು ಲೋಕಸಭೆ ಚುನಾವಣೆ ತಯಾರಿಗೆ ಸಭೆ ನಡೆಸಲಾಗುವುದು. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವುದರ ಬಗ್ಗೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಾಗುವುದು. ಕಾರ್ಯಕರ್ತರು ಮನೆ, ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕು ಎಂದರು