ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಪಾಕಿಸ್ತಾನದ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಹಂತದಲ್ಲಿದೆ.
ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಾಗಿ 13 ಗುತ್ತಿಗೆ ವಿಮಾನಗಳಲ್ಲಿ 5 ವಿಮಾನಗಳನ್ನು ರದ್ದುಗೊಳಿಸಿದ್ದು ಇನ್ನೂ 4 ವಿಮಾನಗಳು ರದ್ದಾಗುವ ಸಾಧ್ಯತೆ ಇದೆ.
ಪಾಕಿಸ್ತಾನಕ್ಕೆ ತಕ್ಷಣ ಸುಮಾರು 636 ಕೋಟಿ ರೂಪಾಯಿಗಳ ಅಗತ್ಯವಿದೆ. ಇಂಧನದ ಹಣ ಪಾವತಿಸದ ಕಾರಣ ಅನೇಕ ಗಲ್ಫ್ ರಾಷ್ಟ್ರಗಳು ಪಾಕಿಸ್ತಾನಕ್ಕೆ ವಿಮಾನ ಹಾರಾಟವನ್ನು ನಿಲ್ಲಿಸಿದೆ. ಒಟ್ಟು ಆಸ್ತಿಗಿಂತ 5 ಪಟ್ಟು ಹೆಚ್ಚು ಅಂದರೆ ಸುಮಾರು 20 ಸಾವಿರ ಕೋಟಿ ರೂ. ಗಿಂತ ಹೆಚ್ಚಿನ ಸಾಲವನ್ನು ಅದು ಹೊಂದಿದೆ ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ವರದಿ ಮಾಡಿದೆ.
ತುರ್ತಾಗಿ ಹಣ ಪಾವತಿ ಮಾಡದೇ ಇದ್ದರೆ ವಿಮಾನಯಾನ ಸಂಸ್ಥೆಯ ಎಲ್ಲ ವಿಮಾನಗಳ ಸೇವೆ ಹಾಗು ಪಿಐಎ ಬೋಯಿಂಗ್ ಮತ್ತು ಏರ್‌ಬಸ್ ವಿಮಾನದ ಬಿಡಿ ಭಾಗಗಳ ಪೂರೈಕೆ ಸೆಪ್ಟೆಂಬರ್ ಮಧ್ಯದ ವೇಳೆಗೆ ನಿಲ್ಲಬಹುದು. ಆದರೆ ಪಿಐಎ ಹಣ ಪಾವತಿ ಬಗ್ಗೆ ಲಿಖಿತ ಭರವಸೆ ನೀಡಿದ್ದರಿಂದ ಸದ್ಯ ವಿಮಾನಯಾನ ಸೇವೆಗಳನ್ನು ಮುಂದುವರಿಸಲಾಗಿದೆ ಎಂದು ಪಿಐಎ ನಿರ್ದೇಶಕರು ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ಇಸ್ಲಾಮಾಬಾದ್ ವಿಮಾನ ನಿಲ್ದಾಣವನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ನಿರ್ಧರಿಸಿದೆ ಎಂದು ಪಾಕಿಸ್ತಾನದ ವಿಮಾನಯಾನ ಸಚಿವ ಖವಾಜಾ ಸಾದ್ ರಫೀಕ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸುಧಾರಿಸಲು, ಅದನ್ನು 15 ವರ್ಷಗಳವರೆಗೆ ಖಾಸಗಿ ಕಂಪೆನಿಗಳಿಗೆ ಗುತ್ತಿಗೆ ನೀಡಲಾಗುವುದು. ಇದರರ್ಥ ಸರ್ಕಾರ ವಿಮಾನ ನಿಲ್ದಾಣವನ್ನು ಮಾರಾಟ ಮಾಡುತ್ತಿದೆ ಎಂದಲ್ಲ, ಉತ್ತಮ ನಿರ್ವಾಹಕರನ್ನು ವಿಮಾನ ನಿಲ್ದಾಣದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆ ಎಂದು ಸಾದ್ ರಫೀಕ್ ಸ್ಪಷ್ಟಪಡಿಸಿದ್ದಾರೆ.