ಬೆಂಗಳೂರು: ಆಶಾ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗಳಿಗೆ ಈಗಿರುವ 5,000 ರೂ.ಗೆ ಬದಲಾಗಿ 7,000 ರೂ. ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಹಿಂಪಡೆಯಬೇಕು ಎಂದು ದಿನೇಶ್ ಗುಂಡೂರಾವ್ ಅವರು ಮನವಿ ಮಾಡಿದ್ದಾರೆ.
ಇನ್ನು ಕರ್ನಾಟಕದಲ್ಲಿ ಶೇ 50 ರಷ್ಟು ಆಶಾ ಕಾರ್ಯಕರ್ತೆಯರಿಗೆ ಅವರು ಮಾಡಿದ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ ಎಂದು ಅವರು ಆರೋಪಿದ್ದಾರೆ. ಅಲ್ಲದೆ, ರಿಪ್ರೊಡಕ್ಟಿವ್ ಆ್ಯಂಡ್ ಚೈಲ್ಡ್ ಹೆಲ್ತ್ (ಆರ್‌ಸಿಎಚ್) ಪೋರ್ಟಲ್ ಅನ್ನು ಪಾವತಿ ಪ್ರಕ್ರಿಯೆಯಿಂದ ಡಿಲಿಂಕ್ ಮಾಡಿ, 15,000 ರೂ. ನಿಗದಿತ ಗೌರವಧನವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ನಿಗದಿತ ಗೌರವಧನವನ್ನು ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.