ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದ ಮಲಯಾಳಂ ಚಿತ್ರ ‘2018′

ಹೊಸದಿಲ್ಲಿ: 2024ರ ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳಿಗೆ ಟೊವಿನೊ ಥಾಮಸ್ ಸೇರಿದಂತೆ ಬಹು ತಾರಾಗಣದ ಮಳಯಾಲಂ ಚಿತ್ರ ‘2018’ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದಿದೆ.

ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ನೇತೃತ್ವದ ಜ್ಯೂರಿ ತಂಡವು ನಿರ್ಧಾರವನ್ನು ಬುಧವಾರ ಪ್ರಕಟಿಸಿದೆ. 2018 ರಲ್ಲಿ ಕೇರಳಕ್ಕೆ ಅಪ್ಪಳಿಸಿದ ಪ್ರವಾಹದ ಕುರಿತಾದ ಚಿತ್ರವಾದ ‘2018ʼ ವಿಮರ್ಶಾತ್ಮಕವಾಗಿಯೂ, ಬಾಕ್ಸ್‌ ಆಫೀಸಿನಲ್ಲೂ ಅದ್ಭುತ ಗೆಲುವು ಸಾಧಿಸಿತ್ತು.

2018ಈ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯನ್ನು ಕಂಡ ಮಲಯಾಳಂ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2018ರ ಪ್ರವಾಹಕ್ಕೆ ಸಿಲುಕಿ ಕೇರಳ ನಲುಗಿದ್ದ ಸಂದರ್ಭದಲ್ಲಿ ಪ್ರಕೃತಿಯ ಪ್ರತಿಕೂಲ ದಾಳಿಯ ವಿರುದ್ಧ ಮಾನವೀಯತೆ ವಿಜಯ ಸಾಧಿಸಿದ ಹಿನ್ನೆಲೆಯನ್ನಿಟ್ಟುಕೊಂಡು ‘2018: Everyone is a Hero’ ಚಿತ್ರವನ್ನು ನಿರ್ಮಿಸಲಾಗಿತ್ತು.

Advertisement

ಆಂಟನಿ ಜೋಸೆಫ್ ನಿರ್ದೇಶನದ ಈ ಚಿತ್ರದಲ್ಲಿ ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಸೇನೆ ತೊರೆಯುವ ಯುವಕನ ಪಾತ್ರವನ್ನು ಟೋವಿನೊ ಥಾಮಸ್ ನಿರ್ವಹಿಸಿದ್ದು ಚಿತ್ರದಲ್ಲಿ ಆಸಿಫ್ ಅಲಿ, ಲಾಲ್, ನಾರಾಯಣ್, ಕುಂಚಕೊ ಬೋಬನ್ ಹಾಗೂ ಅಪರ್ಣಾ ಬಾಲಮುರಳಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಈ ಚಿತ್ರವನ್ನು ಕಾವ್ಯ ಫಿಲ್ಮ್ಸ್ ಕಂಪನಿ ಹಾಗೂ ಪಿಕೆ ಪ್ರೈಮ್ ಪ್ರೊಡಕ್ಷನ್ಸ್ ಲಾಂಛನದಡಿ ವೇಣು ಕುನ್ನಪಿಲ್ಲಿ, ಸಿ.ಕೆ. ಪದ್ಮಕುಮಾರ್ ಹಾಗೂ ಆ್ಯಂಟೊ ಜೋಸೆಫ್ ನಿರ್ಮಿಸಿದ್ದರು. 2018 ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿತ್ತು ಹಾಗೂ ವಿಮರ್ಶಕರು ಹಾಗೂ ಚಿತ್ರಪ್ರೇಮಿಗಳ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು.

ಇದಕ್ಕೂ ಮುನ್ನ ಭಾರತದಿಂದ ಚೆಲ್ಲೊ ಶೋ (2022), ಕೂಳಂಗಳ್ (2021), ಜಲ್ಲಿಕಟ್ಟು (2020), ಗಲ್ಲಿ ಬಾಯ್ (2019), ವಿಲೇಜ್ ರಾಕ್ ಸ್ಟಾರ್ಸ್ (2018), ನ್ಯೂಟನ್ (2017), ವಿಸಾರಣೈ (2016) ಚಲನಚಿತ್ರಗಳು ಅಕಾಡೆಮಿ ಪ್ರಶಸ್ತಿಗಳಿಗೆ ಪ್ರವೇಶ ಪಡೆದಿದ್ದವು. ಆದರೆ, ‘ಮದರ್ ಇಂಡಿಯಾ’, ‘ಸಲಾಂ ಬಾಂಬೆ’ ಹಾಗೂ ‘ಲಗಾನ್’ ಚಿತ್ರಗಳು ಮಾತ್ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು.

2023ರ ಅಕಾಡೆಮಿ ಪ್ರಶಸ್ತಿಗಳಲ್ಲಿ ಭಾರತವು ಎರಡು ಪ್ರಶಸ್ತಿಗಳನ್ನು ಪಡೆದು ಬೀಗಿತ್ತು. ಮೂಲಗೀತೆಗಾಗಿ ಆರ್ ಆರ್ ಆರ್ ಚಿತ್ರದ ‘ನಾಟು ನಾಟು’ ಗೀತೆ ಆಯ್ಕೆಯಾದರೆ, ಕಾರ್ತಿಕಿ ಗೋನ್ಸಾಲ್ವೆ ನಿರ್ದೇಶಿಸಿದ್ದ ‘ದಿ ಎಲಿಫೆಂಟ್ ವಿಸ್ಪರ್ಸ್’ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿಗೆ ಪಾತ್ರವಾಗಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement