‘ಆಸ್ತಿ ಚರ್ಚೆಗೆ ಕುಮಾರಸ್ವಾಮಿಯೇ ಮಹೂರ್ತ ನಿಗದಿ ಮಾಡಲಿ’: ಡಿಸಿಎಂ ಡಿ.ಕೆ.ಶಿವಕುಮಾರ್

ಮದ್ದೂರು:“ಆಸ್ತಿ ವಿಚಾರವಾಗಿ ಚರ್ಚೆ ನಡೆಸಲು ಕುಮಾರಸ್ವಾಮಿ ಶುಭ ಘಳಿಗೆ ಹುಡುಕಿ ತಡ ಮಾಡದೆ ಶುಭ ಮುಹೂರ್ತ ನಿಗದಿ ಮಾಡಲಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಮದ್ದೂರಿನಲ್ಲಿ ನಡೆದ ಜನಾಂದೋಲನ ಸಭೆಯ ನಂತರ ಹಾಗೂ ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದ ಅವರು “ಕಳೆದ 20 ವರ್ಷಗಳಿಂದ ನನ್ನ ಮೇಲೆ ಕುತಂತ್ರ ಮಾಡುತ್ತಲೇ ಇದ್ದಾರೆ. ಇಡಿ, ಸಿಬಿಐ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳು ನನ್ನ ಜಾಲಾಡುತ್ತಿವೆ. ಇವರೂ ಅದನ್ನೇ ತೆಗೆದುಕೊಂಡು ಮಾತನಾಡುತ್ತಿದ್ದಾರೆ, ಮಾತನಾಡಲಿ. ನಾನು ತೆರೆದ ಪುಸ್ತಕ” ಎಂದರು.

“ಕುಮಾರಸ್ವಾಮಿ ಅವರ ಸವಾಲನ್ನು ಸ್ವೀಕರಿಸಿ ವಿಧಾನಸಭೆ ಅಥವಾ ಚಾಮುಂಡಿ ಬೆಟ್ಟ ಎಲ್ಲಿಗೆ ಬರುವಿರಾ ಎಂದು ಕೇಳಿದಾಗ “ವಿಧಾಸಭೆಗೆ ಬರಲಿ. ಆದರೆ ಅವರು ಅಲ್ಲಿಗೆ ಬರಲು ಆಗುವುದಿಲ್ಲ. ಅವರ ಬದಲು ಅಣ್ಣನನ್ನು ಕಳುಹಿಸಲಿ. ಎಲ್ಲಾ ಮಾಧ್ಯಮಗಳು ಬರಲಿ” ಎಂದು ಮರು ಸವಾಲು ಹಾಕಿದರು.

Advertisement

ಮೈಸೂರು ಚಲೋ ಪಾದಯಾತ್ರೆ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಎನ್ನುವಂತೆ ಆಗಿದೆ ಎಂದು ಕೇಳಿದಾಗ “ನನಗೆ ಈ ಪಾದಯಾತ್ರೆಯ ಮೂಲಕ ಅವರುಗಳು ವರ ಕೊಟ್ಟಿದ್ದಾರೆ. ಅವರ ಪಾದಯಾತ್ರೆಯಿಂದಾಗಿ ಅವರ ಅಸೂಯೆ, ಅಕ್ರಮಗಳನ್ನು ಜನರ ಮುಂದಿಡಲು ಅವಕಾಶ ಮಾಡಿಕೊಟ್ಟರು” ಎಂದರು.

ದಲಿತ ಕುಟುಂಬವನ್ನು ಹಾಳು ಮಾಡಿದ್ದೀರಿ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ಅದು ಯಾವ ದಲಿತ ಕುಟುಂಬವನ್ನು ಹಾಳು ಮಾಡಿದ್ದೇನೆಯೋ ಅವರನ್ನು ಕರೆತಂದು ಎದುರಿಗೆ ನಿಲ್ಲಿಸಲಿ. ಇವನು ಕೂಡ ಮಂತ್ರಿ, ಸಿಎಂ ಆಗಿದ್ದನಲ್ಲ ಆಗ ತನಿಖೆ ಮಾಡಿಸಬೇಕಿತ್ತು” ಎಂದರು.

ಬಿಜೆಪಿ, ಜೆಡಿಎಸ್ ಗೆ ಡಿ.ಕೆ.ಶಿವಕುಮಾರ್ ಅವರು ಮಾತ್ರ ಗುರಿಯಾಗುತ್ತಿದ್ದಾರೆ ಎಂದಾಗ “ಅವರಿಗೂ ಅದೇ ಬೇಕು. ಅದಕ್ಕೆ ನಾನು ಸಹ ಸುಮ್ಮನಿದ್ದೇನೆ. ಇದು ನಿಮಗೆ (ಮಾಧ್ಯಮದವರಿಗೆ) ಅರ್ಥವಾಗಬೇಕಲ್ಲವೇ? ಇದರಿಂದ ಮುಡಾ ಹಗರಣ ಎಂಬುದು ಸುಳ್ಳು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕೆ?” ಎಂದರು.

ಪಾದಯಾತ್ರೆ ವೇಳೆ ಮಾಧ್ಯಮದವರ ಮೇಲಿನ ಹಲ್ಲೆ ವಿಚಾರವಾಗಿ ಕೇಳಿದಾಗ “ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ನಾಲ್ಕನೇ ಅಂಗ. ಮಾಧ್ಯಮದವರಿಗೆ ಗೌರವ ನೀಡಬೇಕು. ನಮ್ಮ ಆಚಾರ, ವಿಚಾರಗಳನ್ನು ನೀವು ತಿಳಿಸದೇ ಹೋದರೆ ನಾವುಗಳು ರಾಜಕಾರಣಿಗಳೇ ಆಗುವುದಿಲ್ಲ ಎಂದರು. ಹಲ್ಲೆ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಿರಾ ಎಂದು ಮರು ಪ್ರಶ್ನಿಸಿದಾಗ “ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲದಕ್ಕಿಂತ ಮುಖ್ಯವಾಗಿ ನೀವು ಆ ಪಕ್ಷವನ್ನು ನಿಷೇಧ ಮಾಡಬೇಕು” ಎಂದರು.

ಸರ್ಕಾರ ಬೀಳಲಿದೆ, ಮುಖ್ಯಮಂತ್ರಿಗಳು ರಾಜಿನಾಮೆ ನೀಡುತ್ತಾರೆ ಎಂದು ಕೇಳಿದಾಗ “ಬಿಜೆಪಿಯವರಿಗೆ ಅಸೂಯೆ. ಅಸೂಹೆಗೆ ಮದ್ದಿಲ್ಲ. ಜೊತೆಗೆ ಹಿಂದುಳಿದ ವರ್ಗದ ವ್ಯಕ್ತಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಹೊಟ್ಟೆಕಿಚ್ಚು. ಅಲ್ಲದೇ ನಾವು ನೀಡಿರುವ ಐದು ಗ್ಯಾರಂಟಿಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ಅನುಕರಿಸುತ್ತಿವೆ. ಇದರಿಂದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ತಲೆಬಿಸಿಯಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ವಾತಾವರಣ ಸೃಷ್ಟಿಸುತ್ತಿದೆ. ಜನರಲ್ಲಿ ಗೊಂದಲ ಉಂಟುಮಾಡುತ್ತಿದೆ” ಎಂದರು.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement