ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಪೂರ್ಣ ಪ್ರಮಾಣದ ಬಹು ನಿರೀಕ್ಷೆಯ ರಾಜ್ಯ ಮುಂಗಡ ಪತ್ರವನ್ನು ಫೆ.16 ರಂದು ಮಂಡಿಸಲಿದ್ದಾರೆ. ಅದಕ್ಕೂ ಮುನ್ನ ಇಂದಿನಿಂದ ಫೆಬ್ರವರಿ 23ರವರೆಗೆ ನಡೆಯಲಿರುವ 2024ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವರು.
ಸರ್ಕಾರದ ಯೋಜನೆಗಳ ಬಗ್ಗೆ ಮತ್ತು ಸಾಧನೆಗಳ ಕುರಿತು ತಮ್ಮ ಭಾಷಣದ ಮೂಲಕ ಪ್ರತಿಪಾದಿಸುವರು. ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯದೊಂದಿಗೆ ಆರಂಭವಾಗಲಿರುವ ಅಧಿವೇಶನದಲ್ಲಿ ಆಡಳಿತ ಪಕ್ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧ ನಡೆಯುವುದು ಗ್ಯಾರಂಟಿ. ಲೋಕಸಭೆ ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲಿ ಸರ್ಕಾರದ ಒಂದೊಂದು ವೈಫಲ್ಯಗಳನ್ನಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಸಿಎಂ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ನೇತೃತ್ವದ “ಕೈ” ಪಾಳಯವೂ ಕೂಡ ವಿರೋಧ ಪಕ್ಣಕ್ಕೆ ತಿರುಗೇಟು ನೀಡಲು ಸಾಕಷ್ಟು ತಯಾರಿ ಮಾಡಿಕೊಂಡಂತಿದೆ. ವಿರೋಧ ಪಕ್ಷವಾಗಿರೋ ಬಿಜೆಪಿಯವರ ಬಳಿ ಇರುವ ಅಸ್ತ್ರಗಳಾವವು ಅಂತಾ ನೋಡೋದಾದರೆ.
ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಕರ್ನಾಟಕಕ್ಕೆ ಕೇಂದ್ರ ತೋರುತ್ತಿರುವ ತಾರತಮ್ಯದ ವಿಚಾರವನ್ನು ಪ್ರಸ್ತಾಪಿಸಲು ಹೋಗಿ ಇತ್ತೀಚೆಗೆ ದೇಶ ವಿಭಜನೆಯ ಮಾತು ಆಡಿದ್ದರು. ಇದನ್ನಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ನವರನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಳ್ಳು ಸಾಧ್ಯತೆ ಇದೆ. ಇನ್ನು, ಕೆರೆಗೋಡು ಹನುಮಧ್ವಜ ಪ್ರಕರಣ, ಹಾವೇರಿಯ ಅತ್ಯಾಚಾರ ಪ್ರಕರಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಸರ್ಕಾರದ ಮೇಲೆ ಮಾಡಿರುವ ಶೇ.40 ಲಂಚ ಆರೋಪ, ಬರ ವಿಚಾರದಲ್ಲಿ ಅಸಮರ್ಪಕ ಪರಿಹಾರ ವಿತರಣೆ, ಶಾಸಕರಿಗೆ ಅನುದಾನ ನೀಡಿಕೆಯಲ್ಲಿನ ತಾರತಮ್ಯ ಮತ್ತು ಅನುದಾನ ಕೊರತೆ, ವಿದೇಶ ವಿದ್ಯಾಭ್ಯಾಸಕ್ಕೆಂದು ಮುಸ್ಲಿಂ ವಿದ್ಯಾರ್ಥಿನಿಗೆ ಹತ್ತು ಲಕ್ಷ ಮಂಜೂರು ಮಾಡುವ ಮೂಲಕ ಸಿಎಂ ಮುಸ್ಲಿಮರ ತುಷ್ಟೀಕರಣ ವಿಚಾರ, ಗ್ರಂಥಾಲಯ ಇಲಾಖೆ ಅಕ್ರಮ ಸೇರಿದಂತೆ ಮುಂತಾದ ವಿಚಾರಗಳನ್ನು ಮುಂದೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಸಿದ್ಧಗೊಂಡಂತಿದೆ. ಇತ್ತ ಆಡಳಿತರೂಢ ಕಾಂಗ್ರೆಸ್ ಪಕ್ಷವೂ ಕೂಡ ಪ್ರತಿಪಕ್ಷ ಬಿಜೆಪಿಯ ಈ ಎಲ್ಲ ಅಸ್ತ್ರಗಳಿಗೂ ಪ್ರತ್ಯಸ್ತ್ರವೆಂಬಂತೆ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯದ ಕುರಿತು ವಾಗ್ದಾಳಿ ನಡೆಸಲು ಸನ್ನದ್ಧಗೊಂಡಂತಿದೆ. ರಾಜ್ಯದ ಪಾಲಿನ ತೆರಿಗೆ ನೀಡದ ಕೇಂದ್ರದ ವಿರುದ್ಧ ಇತ್ತೀಚಿಗೆ ದೆಹಲಿಯಲ್ಲಿ ಧರಣಿ ನಡೆಸಬೇಕಾಯಿತು. ಆದರೆ, ಇಪ್ಪತೈದು ಮಂದಿ ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಯಾವ ಪ್ರಯೋಜನವೂ ಆಗಿಲ್ಲವೆಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನು, ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್ ಪಕ್ಷವು ಬಿಜೆಪಿ ಜೊತೆ ಧ್ವನಿಗೂಡಿಸುವುದರಿಂದ ಗದ್ದಲ-ಗಲಾಟೆಗಳ ಭರಾಟೆ ಮತಷ್ಟು ಜೋರಾಗಬಹುದೇನೋ!

































