ಚಿತ್ರದುರ್ಗ: ನ್ಯಾಫೆಡ್ ಸಂಸ್ಥೆಯ ಪರವಾಗಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದಿಂದ 2024ನೇ ಸಾಲಿಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉಂಡೆಕೊಬ್ಬರಿಯನ್ನು ಖರೀದಿಸಲು ಇದೇ ಜನವರಿ 20 ರಿಂದ ರೈತರ ನೊಂದಣಿ ಪ್ರಾರಂಭ ಮಾಡಲಾಗುವುದು.
ಸರ್ಕಾರದ ನಿರ್ದೇಶನದಂತೆ ಪ್ರತಿ ಕ್ವಿಂಟಾಲ್‍ಗೆ ರೂ.12000/-ಗಳನ್ನು ನಿಗದಿಪಡಿಸಲಾಗಿದೆ. ನೊಂದಣಿಗೆ 45 ದಿನಗಳ ಕಾಲವಕಾಶವಿದ್ದು, 3 ತಿಂಗಳ ವರೆಗೆ ಕೊಬ್ಬರಿ ಖರೀದಿ ಮಾಡಲಾಗುವುದು. ಪ್ರತಿ ರೈತರಿಗೆ 6 ಕ್ವಿಂಟಾಲ್‍ನಂತೆ ಗರಿಷ್ಠ 20 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನಿಸಿದೆ. ಚಿತ್ರದುರ್ಗ, ಹಿರಿಯೂರು ಹಾಗೂ ಹೊಸದುರ್ಗ ಎ.ಪಿ.ಎಂ.ಸಿಗಳಲ್ಲಿ ರೈತರು ಆಧಾರ್ ಕಾರ್ಡ್ ಮತ್ತು ಎಫ್.ಐ.ಡಿ ಕಾರ್ಡ್‍ಗಳೊಂದಿಗೆ ಬಯೋಮೆಟ್ರಿಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಸೂಚನೆಯಂತೆ ಹೊಸದುರ್ಗ ಎ.ಪಿ.ಎಂ.ಸಿ ಆವರಣದಲ್ಲಿ ಎರಡು ಹಾಗೂ ಶಾಸಕ ಕೆ.ಸಿ.ವೀರೇಂದ್ರ ಪ್ಪಪ್ಪಿ ನಿರ್ದೇಶನದಂತೆ ಚಿತ್ರದುರ್ಗ ಎ.ಪಿ.ಎಂ.ಸಿಯಲ್ಲಿ ಈ ಬಾರಿ ಹೊಸದಾಗಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲಾಗಿದೆ. ಇದರೊಂದಿಗೆ ಹಿರಿಯೂರಿನ ಎ.ಪಿ.ಎಂ.ಸಿಯಲ್ಲೂ ಕೊಬ್ಬರಿ ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಬಸವೇಶ ಎಸ್. ನಾಡಿಗರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.