ಚಿತ್ರದುರ್ಗ:ವಾಣಿ ವಿಲಾಸ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಇದೇ ಮಾರ್ಚ್ 22 ರಿಂದ ನೀರು ಹರಿಸಲಿದ್ದು, ವೇದಾವತಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 18.92 ಟಿಎಂಸಿ ನೀರಿನ ಸಂಗ್ರಹಣೆ ಇದ್ದು, ಮಾರ್ಚ್ 16ರಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಲಹಾ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದ ಮೂಲಕ ನಡೆದ ಕುಡಿಯುವ ನೀರಿನ ಸಲಹಾ ಸಮಿತಿ ಸಭೆಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯದಿಂದ 0.25 ಟಿ.ಎಂ.ಸಿ ನೀರನ್ನು ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆ ತಾಲ್ಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರು ಹರಿಸಲು ಅನುಮೋದನೆ ನೀಡಲಾಗಿದೆ.
ವಾಣಿ ವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಪ ಪಾತ್ರದಲ್ಲಿ ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕು ಕಾತ್ರಿಕೇನಹಳ್ಳಿ ಅಣೆಕಟ್ಟು ಮುಖಾಂತರ ವೇದಾವತಿ ನದಿ ಪಾತ್ರದಲ್ಲಿ ಬರುವ ಲಕ್ಕವ್ವನಹಳ್ಳಿ, ಕಸವನಹಳ್ಳಿ, ಹಳೆಯಳನಾಡು, ಕೂಡ್ಲಹಳ್ಳಿ, ಓಬೇನಹಳ್ಳಿ ಬ್ಯಾರೇಜ್‍ಗಳಲ್ಲಿ scouring Sluice gates ಗಳನ್ನು ತೆಗೆದಿರಿಸಿ ಈ ಬ್ಯಾರೇಜ್‍ಗಳ ಮುಖಾಂತರ ನೀರು ಸರಾಗವಾಗಿ ಹರಿದು ಚಳ್ಳಕೆರೆ ತಾಲ್ಲೂಕಿಗೆ ತಲುಪುವಂತೆ ಮಾಡಲು ಸಣ್ಣ ನೀರಾವರಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಈ ಬ್ಯಾರೇಜ್‍ಗಳ ಮುಖಾಂತರ 0.25 ಟಿ.ಎಂ.ಸಿ ನೀರನ್ನು ಹರಿಸುವುದು ಒಳಗೊಂಡಂತೆ ಚಳ್ಳಕೆರೆ ತಾಲ್ಲೂಕಿನ ನದಿ ಪಾತ್ರದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಿರುವ ಬೊಂಬೇರಹಳ್ಳಿ, ಚೌಳೂರು ಮತ್ತು ಪರಶುರಾಂಪುರ ಗ್ರಾಮಗಳ ಹತ್ತಿರ ನಿರ್ಮಿಸಿರುವ ಬ್ಯಾರೇಜ್‍ಗಳ ಮುಖಾಂತರ ನೀರು ಹರಿಸಲು ಆದೇಶ ನೀಡಲಾಗಿದೆ.
ಮಾರ್ಚ್ 22 ರಿಂದ ವೇದಾವತಿ ನದಿ ಮೂಲಕ ನೀರು ಹರಿಸುವುದರಿಂದ ಹಿರಿಯೂರು ಹಾಗೂ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹರಿಯುವ ವೇದಾವತಿ ನದಿ ಪಾತ್ರದಲ್ಲಿ ಬರುವ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ಹಾಗೂ ಜಾನುವಾರುಗಳ ಸುರಕ್ಷತೆ ಬಗ್ಗೆ ಮುಂಜಾಗ್ರತಾ ಕ್ರಮವಹಿಸಲು ಕೋರಲಾಗಿದೆ.
ವೇದಾವತಿ ನದಿ ಪಾತ್ರದಲ್ಲಿ ಹಿರಿಯೂರು ತಾಲ್ಲೂಕಿನ ಕಾತ್ರಿಕೇನಹಳ್ಳಿ, ಲಕ್ಕವ್ವನಹಳ್ಳಿ, ಹಿರಿಯೂರು, ಪಟ್ರಿಹಳ್ಳಿ, ಗುಡ್ಲು, ಆಲೂರು, ಪಿಟ್ಲಾಲಿ, ಕಸವನಹಳ್ಳಿ, ರಂಗನಾಥಪುರ, ಉಪ್ಪಳಗೆರೆ, ದೊಡ್ಡಕಟ್ಟೆ, ಹೊಸಯಳನಾಡು, ಟಿ.ನಾಗೇನಹಳ್ಳಿ, ಕೂಡ್ಲಹಳ್ಳಿ, ಮಸ್ಕಲ್, ಬ್ಯಾಡರಹಳ್ಳಿ, ದೇವರಕೊಟ್ಟ, ತೊರೆಬೀರನಹಳ್ಳಿ, ಒಬೇನಹಳ್ಳಿ, ಕಂಬದಹಳ್ಳಿ, ಬಿದರಿಕೆರೆ, ಶಂಕರನಹಳ್ಳಿ, ಶಿಡ್ಲಯ್ಯನಕೋಟೆ ಸೇರಿದಂತೆ ಒಟ್ಟು 23 ಗ್ರಾಮಗಳು ಬರಲಿವೆ. ಚಳ್ಳಕೆರೆ ತಾಲ್ಲೂಕಿನ ಗೊಲ್ಲರಹಟ್ಟಿ, ಬಂದರಿನಹಟ್ಟಿ, ಕಲ್ಮರಹಳ್ಳಿ, ಹೊಸಹಳ್ಳಿ ಸಾಲುಹುಣಸೆ, ಸೂಗೂರು, ಗೊರಲತ್ತು, ಬುರುಡನಕುಂಟೆ, ತೊರೆಬೀರನಹಳ್ಳಿ, ನಾರಾಯಣಪುರ, ಕೂಣಿಗೆರೆನಹಳ್ಳಿ, ಯಳಗಟ್ಟೆ, ನಲ್ಲೂರಹಳ್ಳಿ, ಬೊಂಬೇರಹಳ್ಳಿ, ವಡೇರಹಳ್ಳಿ, ಗೋಸಿಕೆರೆ, ಸೂರನಹಳ್ಳಿ, ಚೌಳೂರು, ಅಲ್ಲಾಪುರ, ಪರಶುರಾಂಪುರ, ಪಗಡಲಬಂಡೆ, ಜಾಜೂರು ಸೇರಿದಂತೆ ಒಟ್ಟು 22 ಗ್ರಾಮಗಳು ಬರಲಿದ್ದು, ಹಿರಿಯೂರು ತಾಲ್ಲೂಕು 23 ಗ್ರಾಮಗಳು ಹಾಗೂ ಚಳ್ಳಕೆರೆ ತಾಲ್ಲೂಕಿನ 22 ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವ ಜೊತೆಗೆ ತಮ್ಮ ಜಾನುವಾರುಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನಾ ವೃತ್ತ ನಂ.2ರ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.