ತ್ರಿಶೂರ್: ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ (Suresh Gopi) ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು (Indira Gandhi) ‘ಭಾರತ ಮಾತೆ’ ಎಂದು ಕರೆದಿದ್ದಾರೆ. ಇದೇ ವೇಳೆ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರನ್ನು ‘ಧೈರ್ಯಶಾಲಿ ಆಡಳಿತಗಾರ’ ಎಂದು ನಟ ಹಾಗೂ ರಾಜಕಾರಣಿ ಸುರೇಶ್ ಗೋಪಿ ಬಣ್ಣಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸುರೇಶ್ ಗೋಪಿ ಅವರು ಮಾಜಿ ಮುಖ್ಯಮಂತ್ರಿಗಳಾದ ಕರುಣಾಕರನ್ ಮತ್ತು ಇ.ಕೆ ನಾಯನಾರ್ ಅವರನ್ನು ತಮ್ಮ ‘ರಾಜಕೀಯ ಗುರುಗಳು’ ಎಂದು ಕರೆದಿದ್ದಾರೆ. ತಮ್ಮ ಕ್ಷೇತ್ರವಾದ ತ್ರಿಶೂರ್‌ನಲ್ಲಿರುವ ಕರುಣಾಕರನ್ ಅವರ ಸ್ಮಾರಕ ‘ಮುರಳಿ ಮಂದಿರಂ’ಗೆ ಭೇಟಿ ನೀಡಿದ ನಂತರ ಮಾತನಾಡಿದ ಬಿಜೆಪಿ ನಾಯಕ ಸುರೇಶ್ ಗೋಪಿ ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಭಾರತ ಮಾತೆ, ಮಾರ್ಕ್ಸ್‌ವಾದಿ ಹಿರಿಯ ನಾಯಕರನ್ನು ತನ್ನ ರಾಜಕೀಯ ಗುರು ಎಂದು ಕರೆದಿರುವ ಸುರೇಶ್ ಗೋಪಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದಿರಾ ಗಾಂಧಿ ಹೇಗೆ “ಭಾರತದ ಮಾತೆ”ಯೋ ಹಾಗೇ ಕರುಣಾಕರನ್ “ಕೇರಳ ರಾಜ್ಯದ ಕಾಂಗ್ರೆಸ್ ಪಕ್ಷದ ಪಿತಾಮಹ” ಎಂದು ಹೇಳಿದ್ದಾರೆ.