ಬೆಂಗಳೂರು: 2023–24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಮೇ 9ರಂದು ಇಂದು ಪ್ರಕಟವಾಗಲಿದೆ.
4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರೂ ಸೇರಿದಂತೆ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಇದೇ ಮೊದಲ ಬಾರಿ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದ್ದು, ಮೇ ಮೂರನೇ ವಾರದಲ್ಲೇ ಎರಡನೇ ಪರೀಕ್ಷೆ ಆರಂಭವಾಗಲಿದೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆಯೋ ಅದರ ಅಂಕಪಟ್ಟಿ ಪಡೆಯಬಹುದು.
ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.