ಬೆಂಗಳೂರು: ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರ ಪರಿಣಾಮ ರಾಜ್ಯದಲ್ಲಿ ಬರ ಆವರಿಸಿದ್ದು, ಬರ ಅಧ್ಯಯನ ನಡೆಸಲು ಇಂದು ರಾಜ್ಯಕ್ಕೆ ಕೇಂದ್ರ ತಜ್ಞರ ತಂಡ ಆಗಮಿಸಲಿದೆ. ರಾಜ್ಯದ 195 ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಈಗಾಗಲೇ ಘೋಷಿಸಿದೆ. ಜೊತೆಗೆ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಗುರುತಿಸಲಾಗಿದೆ. ಮಳೆ ಪ್ರಮಾಣ ತೀವ್ರವಾಗಿ ಕುಸಿದ ಪರಿಣಾಮ ಸುಮಾರು ಒಂದು ಕೋಟಿ ಎಕರೆ ಅಂದರೆ 39,039 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು 6 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ತಿಳಿಸಿತ್ತು. ಇಂದು ಮಧ್ಯಾಹ್ನದೊಳಗೆ ಬೆಂಗಳೂರಿಗೆ ಆಗಮಿಸಲಿರುವ ಹತ್ತು ಅಧಿಕಾರಗಳ ಕೇಂದ್ರ ತಂಡ ಮೂರು ಗುಂಪುಗಳಾಗಿ ರಾಜ್ಯದ 195 ತಾಲೂಕುಗಳ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವಾಂಶಗಳನ್ನು ಒರಿಶೀಲಿಸಲಿದೆ. ಅದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ತಜ್ಞರ ತಂಡ ಭೇಟಿ ಮಾಡಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.