ಚಿತ್ರದುರ್ಗ : ಇಂದು ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ದೊಡ್ಡ ರಥೋತ್ಸವ ಮಾರ್ಚ್ 26 ರಂದು ಮಂಗಳವಾರ ನಡೆಯಲಿದೆ.
ಜಾತ್ರೆಯ ಅಂತಿಮ ಹಂತದ ಸಿದ್ಧತೆಗಳ ಕುರಿತು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಸೋಮವಾರ ಪರಿಶೀಲನೆ ನಡೆಸಿದರು.
ಐತಿಹಾಸಿಕ ನಾಯಕನಹಟ್ಟಿ ಜಾತ್ರೆಗೆ ನಾಡಿನ ಹಲವು ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತಾಧಿಕಾರಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ, ಕುಡಿಯುವ ನೀರಿಗೆ ವಿಶೇಷವಾದ ವ್ಯವಸ್ಥೆ ರೂಪಿಸಲಾಗಿದೆ. ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠ ಮತ್ತು ಹೊರಮಠದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ಎರಡೂ ದೇವಾಲಯದ ಆವರಣ ಸ್ವಚ್ಛಗೊಳಿಸಲಾಗಿದೆ. ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡೂ ದೇವಾಲಯಗಳ ಆವರಣದಲ್ಲಿ ಬೃಹತ್ ಚಪ್ಪರದ ವ್ಯವಸ್ಥೆ ಮಾಡಲಾಗಿದೆ. ನೆರೆಯ ಆಂದ್ರ ಪ್ರದೇಶ, ತೆಲಂಗಾಣ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳು ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಈ ಎಲ್ಲಾ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಎಂ.ಕಾರ್ತಿಕ್ ಸೋಮವಾರ ಪರಿಶೀಲಿಸಿದರು.