ಬೆಂಗಳೂರು: ಭಾರತದ ಚಂದ್ರಯಾನ-3 ರ ಯಶಸ್ಸಿನ ನಂತರ ಇಸ್ರೋದ ಸೂರ್ಯ ಮಿಷನ್ ಆಗಿರುವ ಆದಿತ್ಯ ಎಲ್-1 ನಿನ್ನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದು, ಆದಿತ್ಯ ಎಲ್1 ತನ್ನ ಮೊದಲ ಕಕ್ಷೆಯನ್ನು ಇಂದು ಬದಲಾಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಹ್ಯಾಕಾಶ ನೌಕೆಯು ಸುಮಾರು 125 ದಿನಗಳ ಕಾಲ ಪ್ರಯಾಣಿಸುವ ನಿರೀಕ್ಷೆಯಿದ್ದು, ಇದು ಸೂರ್ಯನಿಗೆ ಹತ್ತಿರವಿರುವ ಲಾಗ್ರಾಂಜಿಯನ್ ಪಾಯಿಂಟ್ L1 ಸುತ್ತ ಹಾಲೋ ಕಕ್ಷೆಯನ್ನು ತಲುಪುತ್ತದೆ.
ಇನ್ನು ಆದಿತ್ಯ- ಎಲ್1 ಭೂಮಿಯ ಸುತ್ತ 16 ದಿನಗಳ ಕಾಲ ಸುತ್ತುತ್ತದೆ ಮತ್ತು ತನ್ನ ವೇಗವನ್ನು ನಿರಂತರವಾಗಿ ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಉಪಗ್ರಹದ ಕಕ್ಷೆಯನ್ನು 5 ಬಾರಿ ಬದಲಾಯಿಸಲಾಗುತ್ತದೆ ಎನ್ನಲಾಗಿದೆ.