ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಮುಡಾ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಇಡೀ ರಾಜ್ಯ ಅಷ್ಟೇ ಅಲ್ದೇ ಇಡೀ ದೇಶದ ಚಿತ್ತ ಇಂದು ಪ್ರಕಟವಾಗಲಿರುವ ಹೈಕೋರ್ಟ್ ತೀರ್ಪಿನತ್ತ ಎದರುನೋಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ನಿರ್ಧಾರ ಮಾಡಲಿದೆ ಈ ತೀರ್ಪು ಎಂದು ವ್ಯಾಖ್ಯಾನಿಸಲಾಗುತ್ತಿದೆ ಹೀಗಾಗಿ ಇಂದು ಪ್ರಕಟವಾಗಲಿರುವ ತೀರ್ಪು ಸಾಕಷ್ಟು ಕುತೂಹಲ ಮೂಡಿಸಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು ಹೊರ ಬೀಳಲಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಣೆಗಾಗಿ ಪ್ರಕರಣ ನಿಗದಿಯಾಗಿದೆ. ಅರ್ಜಿ ಕುರಿತು ಸಿದ್ದರಾಮಯ್ಯ, ಪ್ರತಿವಾದಿಗಳಾದ ರಾಜ್ಯಪಾಲರ ಕಚೇರಿ, ರಾಜ್ಯ ಸರ್ಕಾರ ಹಾಗೂ ಮೂವರು ದೂರುದಾರರ ಪರ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೆಪ್ಟೆಂಬರ್ 12ರಂದು ತೀರ್ಪು ಕಾಯ್ದಿರಿಸಿದ್ದರು. ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಪ್ರೊ.ರವಿವರ್ಮಕುಮಾರ್ ವಾದ ಮಂಡಿಸಿದ್ದರೆ, ರಾಜ್ಯಪಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರ ಪರವಾಗಿ ಹಿರಿಯ ವಕೀಲರಾದ ಕೆ.ಜಿ.ರಾಘವನ್, ಪ್ರಭುಲಿಂಗ ಕೆ. ನಾವದಗಿ ಹಾಗೂ ಲಕ್ಷ್ಮೀ ಅಯ್ಯಂಗಾರ್ ವಾದ ಮಂಡಿಸಿದ್ದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ