ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಭಾಗವಾಗಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯವಾಗಿದೆ.
ಸದ್ಯ ಚೆನ್ನೈ 14 ಹಾಗೂ ಆರ್‌ಸಿಬಿ 12 ಅಂಕಗಳನ್ನು ಹೊಂದಿವೆ. ನೆಟ್ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್ ಹೊಂದಿದೆ. ಕೇವಲ ಗೆಲ್ಲುವುದಷ್ಟೇ ಅಲ್ಲ, ರನ್‌ರೇಟ್‌ನಲ್ಲಿ ಚೆನ್ನೈಯನ್ನು ಹಿಂದಿಕ್ಕಬೇಕಾದ ಒತ್ತಡ ಆರ್‌ಸಿಬಿಯದ್ದು. ಆಗ ಆರ್‌ಸಿಬಿ ಕನಿಷ್ಠ 18 ರನ್ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು.
ಒಂದು ವೇಳೆ ಈ ಪಂದ್ಯಕ್ಕೆ ನಿರಂತರ ಮಳೆ ಅಡಚಣೆಯನ್ನುಂಟು ಮಾಡಿದರೆ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯವನ್ನು ಆಡಿಸಬೇಕಾಗುತ್ತದೆ. ಹೀಗೆ 5 ಓವರ್ಗಳ ಪಂದ್ಯ ನಡೆದು ಸಿಎಸ್ಕೆ ತಂಡವು ಮೊದಲು ಬ್ಯಾಟ್ ಮಾಡಿ 85 ರನ್ಗಳ ಗುರಿ ನೀಡಿದರೆ, ಆರ್‌ಸಿಬಿ ತಂಡವು ಅದನ್ನು 3.1 ಓವರ್ಗಳಲ್ಲಿ ಚೇಸ್ ಮಾಡುವುದು ಅನಿವಾರ್ಯ. ಅಂದರೆ 5 ಓವರ್ಗಳ ಪಂದ್ಯ ನಡೆದರೆ ಟಾರ್ಗೆಟ್ ಎಷ್ಟೇ ಇದ್ದರೂ ಆರ್‌ಸಿಬಿ ತಂಡವು 3.1 ಓವರ್ಗಳಲ್ಲಿ ಚೇಸ್ ಮಾಡಲೇಬೇಕು. ಇಲ್ಲದಿದ್ದರೆ ಗೆದ್ದರೂ ಆರ್‌ಸಿಬಿ ತಂಡವು ಅಂಕ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಲಿದೆ.