ಭೋಪಾಲ್: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 1,72,798 ನೋಟಾ ಮತಗಳು ಗಳಿಸಿದ್ದು, ಈ ಮೂಲಕ ಬಿಹಾರದ ಗೋಪಾಲ್‌ಗಂಜ್‌ನ ಕ್ಷೇತ್ರದಲ್ಲಿ ದಾಖಾಲಾಗಿದ್ದ ಹಿಂದಿನ ನೋಟಾ ದಾಖಲೆಯನ್ನು ಮುರಿದಂತಾಗಿದೆ.
ಈ ಬಾರಿಯ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು, ಏಪ್ರಿಲ್ 29ರಂದು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಬಿಜೆಪಿಗೆ ಪಾಠ ಕಲಿಸಲು ಇವಿಎಂಗಳಲ್ಲಿ ನೋಟಾ ಆಯ್ಕೆಯನ್ನು ಆರಿಸುವಂತೆ ಇಂದೋರ್‌ನ ಮತದಾರರಿಗೆ ಕಾಂಗ್ರೆಸ್ ಮನವಿ ಮಾಡಿತ್ತು. ಇದರ ಪರಿಣಾಮವಾಗಿಯೇ ಇದೀಗ 1.7 ಲಕ್ಷಕ್ಕೂ ಹೆಚ್ಚು ನೋಟಾ ಮತಗಳು ಬಂದಿವೆ.
ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಅನುಸಾರ, ಇಂದೋರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ್ ಲಾಲ್ವಾನಿ 9,90,698 ಮತಗಳು, ಹಾಗೂ ನೋಟಾಕ್ಕೆ 1,72,798 ಮತಗಳನ್ನು ಪಡೆದಿದೆ. ಜೊತೆಗೆ ಇಂದೋರ್‌ನಲ್ಲಿ ಎಲ್ಲಾ 13 ಅಭ್ಯರ್ಥಿಗಳು ಇಲ್ಲಿಯವರೆಗೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಗಳಿಸಿದ್ದಾರೆ.
				
															
                    
                    
                    
                    
                    

































