ಮುಂಬೈ: ಕರವಾಳಿ ಬೆಡಗಿ ಶಿಲ್ಪಾ ಶೆಟ್ಟಿ ಇದೀಗ ಸುಖಿ ಸಿನಿಮಾದ ಮೂಲಕ ಅಭಿಮಾನಿಗಳನ್ನು ಮನರಂಜಿಸಲು ಸಜ್ಜಾಗಿದ್ದಾರೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ ಪುನರ್ಜನ್ಮ ಬಗ್ಗೆ ನಟಿ ಭಾವುಕರಾಗಿದ್ದಾರೆ. ಶಿಲ್ಪಾ ಶೆಟ್ಟಿ ಹೊಟ್ಟೆಯಲ್ಲಿದ್ದಾಗ ಗರ್ಭಪಾತ ಮಾಡಿಸುವಂತೆ ಅವರ ತಾಯಿಗೆ ಸಲಹೆ ನೀಡಿದ್ದರ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ನಟಿ ಶಿಲ್ಪಾನೇಮ್ ಫೇಮ್ ನಡುವೆ ತಾವು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸಂಕಷ್ಟದ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ನನ್ನ ತಾಯಿಯ ಗರ್ಭದಲ್ಲಿದ್ದ ವೇಳೆ ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿ ಗರ್ಭಪಾತ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು.
ಯಾಕೆಂದರೆ ಅವರಿಗೆ ನಿರಂತರ ರಕ್ತಸ್ರಾವ ಆಗುತ್ತಿತ್ತು. ಆದರೂ ತಾಯಿ ಗರ್ಭಪಾತ ಮಾಡಿಸದೇ ದೇವರ ಮೇಲೆ ಭಾರ ಹಾಕಿದ್ದರು. ಅಂದು ಅಂತಹ ಸನ್ನಿವೇಶದಲ್ಲಿ ನಾನು ಹುಟ್ಟಿದೆ. ಇದು ನಿಜಕ್ಕೂ ನನ್ನ ಪುನರ್ಜನ್ಮ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟ ಎದುರಾಗುತ್ತದೆ. ಆದರೆ ನಾವು ಹೇಗೆ ಅದನ್ನ ಎದುರಿಸುತ್ತೇವೆ ಎಂಬುವುದರ ಮೇಲೆ ಇರುತ್ತದೆ ಎಂದಿದ್ದಾರೆ.