ಬೆಂಗಳೂರು :ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚನೆ ನೀಡಲಾಗಿದೆ.
ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸಲಾಗುತ್ತಿತ್ತು. ಈ ದಾರಗಳು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಸಾಕಷ್ಟು ತೊಂದರೆಗಳು ಕೂಡಾ ಕಂಡುಬಂದಿದ್ದವು. ಹಾಗೇ ಬೈಕ್ ಸವಾರರು ಕೂಡ ಇದರಿಂದ ಸಮಸ್ಯೆ ಎದುರಿಸಿದ್ದಾರೆ.
ಈ ಎಲ್ಲಾ ಪ್ರಕರಣ ಮನಗಂಡ ನಂತರ ಕೋರ್ಟ್ ಮೆಟ್ಟಿಲೇರಿದ ವಿಚಾರದ ಅನ್ವಯವಾಗಿ ಇದೀಗ ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಮಾರ್ಗಸೂಚಿ ಹೊರಡಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಅದರಂತೆ 2016ರಲ್ಲಿ ಕರ್ನಾಟಕ ಸರ್ಕಾರ ಗಾಳಿಪಟ ಹಾರಿಸಲು ನೈಲಾನ್ ಅಥವಾ ಚೀನಿ ದಾರ ಅಥವಾ ಮಾಂಜಾ ದಾರ ಬಳಕೆಯನ್ನು ನಿಷೇಧಿಸಿತು.
ಇದೀಗ ರಾಜ್ಯ ಸರ್ಕಾರ 2016ರ ಅಧಿಸೂಚನೆಗೆ ಕೆಲ ತಿದ್ದುಪಡಿಯನ್ನು ಮಾಡಿ ಆದೇಶವನ್ನು ಹೊರಡಿಸಿದೆ. ಯಾವುದೇ ವ್ಯಕ್ತಿ, ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಚೀನಿ ದಾರ ಅಥವಾ ಮಾಂಜಾ ದಾರ ತಯಾರು, ದಾಸ್ತಾನು ಮಾಡುವುದವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು, ತಯಾರು ಮತ್ತು ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕಠಿಣಕ್ರಮ ಕೈಗೊಳ್ಳುವುದಾಗಿ ಎಂಬುವುದಾಗಿ ಎಚ್ಚರಿಕೆ ನೀಡಿದೆ.
ಗಾಳಿಪಟ ಹಾರಿಸುವವರು ಕೂಡಾ ಯಾವುದೇ ಚೂಪಾದ, ಗಾಜು, ಅಂಟುಗಳು, ದಾರವನ್ನು ಬಲಪಡಿಸುವ ವಸ್ತುಗಳಿಂದ ತಯಾರಿಸಿದ ದಾರವನ್ನು ಬಳಸುವಂತಿಲ್ಲ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಗಾಳಿಪಟ ಹಾರಾಟಕ್ಕೆ ಬಳಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.