ಕರ್ನಾಟಕ ರಾಜ್ಯ ಪೊಲೀಸ್ (Karnataka State Police) ಇಲಾಖೆಯಲ್ಲೇ ಇದೇ ಮೊದಲ ಬಾರಿಗೆ ಹೊಸ ಕ್ರಮವೊಂದು ಅಸ್ತಿತ್ವಕ್ಕೆ ಬಂದಿದೆ. ಈವರೆಗೂ ಎಲ್ಲಾ ಜಿಲ್ಲೆಗಳಿಗೆ ತೆರಳಿ ಡಿಜಿ ಹಾಗೂ ಐಜಿಪಿ (DG and IGP) ನಡೆಸುತ್ತಿದ್ದ ಪರಿವೀಕ್ಷಣಾ ಸಭೆಗಳನ್ನು ಈಗ ಎಡಿಜಿಪಿಗಳು ಹಾಗೂ ಐಜಿಪಿ (ADGP and IGP) ರ‍್ಯಾಂಕಿಂಗ್ ಅಧಿಕಾರಿಗಳಿಗೆ ವಹಿಸಲಾಗಿದೆ. ಜೊತೆಗೆ ಪರಿವೀಕ್ಷಣೆ ನಡೆಸಿದ ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳು ತಾವು ಕಂಡ ಸರಿ, ತಪ್ಪು-ಒಪ್ಪುಗಳನ್ನು ವರದಿ ಮುಖಾಂತರ ಡಿಜಿ ಹಾಗೂ ಐಜಿಪಿಗೆ ಸಲ್ಲಿಸಲಿದ್ದಾರೆ.
ಇದೇ ತಿಂಗಳ 15 ರಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಜೊತೆ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕೆಲವು ನಿರ್ದೇಶನಗಳನ್ನು ನೀಡಲಾಗಿತ್ತು. ಆ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯಾವೈಖರಿ ಪರಿಶೀಲನೆ ಹಾಗೂ ಪರಿವೀಕ್ಷಣೆಗೆ ಹೊಸ ನಿಯಮವನ್ನು ಜಾರಿ ಮಾಡಲಾಗಿದ್ದು, ಎಡಿಜಿಪಿ/ಐಜಿಪಿ ರ್ಯಾಂಕ್ನ ಅಧಿಕಾರಿಗಳು ಜಿಲ್ಲೆಗಳಿಗೆ ತೆರಳಿ ಈ ಹಿಂದೆ ಡಿಜಿ, ಐಜಿಪಿ ನಡೆಸುತಿದ್ದ ಪರಿಶೀಲನೆಗಳ ಕರ್ತವ್ಯ ನಿರ್ವಹಿಸಲಿದ್ದಾರೆ.
ರಾಜ್ಯದ ಪ್ರತಿ ಎರಡು ಜಿಲ್ಲೆಗೆ ಒಬ್ಬರು ಎಡಿಜಿಪಿ, ಐಜಿಪಿ ರ್ಯಾಂಕ್ನ ಅಧಿಕಾರಿಗಳ ನಿಯೋಜನೆ ಮಾಡಿದ್ದು, ಸಂಬಂಧಪಟ್ಟ ಆ ಅಧಿಕಾರಿಗಳು ಜಿಲ್ಲೆಗಳಿಗೆ ತೆರಳಿ ಪ್ರತಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಪರಿವೀಕ್ಷಣೆ ನಡೆಸಲಿದ್ದಾರೆ. ಜಿಲ್ಲೆಗಳಲ್ಲಿನ ಪೊಲೀಸ್ ಸಿಬ್ಬಂದಿಗಳ ಕುಂದುಕೊರತೆ, ಪ್ರಕರಣಗಳ ತನಿಖೆ, ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಕಾರ್ಯವೈಖರಿ, ಕಾಮಗಾರಿ ಚಟುವಟಿಕೆ ಹಾಗೂ ಆರೋಪಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಲಿದ್ದಾರೆ.
ಯಾವ ಎಡಿಜಿಪಿ, ಐಜಿಪಿ ರ‍್ಯಾಂಕ್ ಅಧಿಕಾರಿಗಳಿಗೆ ಯಾವ ಜಿಲ್ಲೆ?
- ಪ್ರಣಬ್ ಮೊಹಂತಿ, ಎಡಿಜಿಪಿ:- ಕೊಲಾರ ಮತ್ತು ಉತ್ತರ ಕನ್ನಡ.
- ಅಲೋಕ್ ಕುಮಾರ್, ಎಡಿಜಿಪಿ:- ದಾವಣಗೆರೆ ಮತ್ತು ಬೀದರ್.
- ಉಮೇಶ್ ಕುಮಾರ್, ಎಡಿಜಿಪಿ:- ಮೈಸೂರು ಮತ್ತು ಚಿಕ್ಕಬಳ್ಳಾಪುರ.
- ಸೀಮಂತ್ ಕುಮಾರ್ ಸಿಂಗ್, ಎಡಿಜಿಪಿ:- ಬಿಜಾಪುರ ಮತ್ತು ಬಳ್ಳಾರಿ.
- ಹಿತೇಂದ್ರ, ಎಡಿಜಿಪಿ:- ಮಂಡ್ಯ ಮತ್ತು ಶಿವಮೊಗ್ಗ.
- ಮುರುಗನ್, ಎಡಿಜಿಪಿ:- ಚಿತ್ರದುರ್ಗ ಮತ್ತು ರಾಯಚೂರು.
- ಮನೀಶ್ ಖಾರ್ಬಿಕರ್, ಎಡಿಜಿಪಿ:- ಕಲಬುರ್ಗಿ, ಮೈಸೂರು ಸಿಟಿ.
- ಸೌಮೇಂದು ಮುಖರ್ಜಿ, ಎಡಿಜಿಪಿ:- ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ.
- ಚಂದ್ರಶೇಖರ್, ಎಡಿಜಿಪಿ:- ಬೆಳಗಾವಿ ಮತ್ತು ತುಮಕೂರು.
- ವಿಪುಲ್ ಕುಮಾರ್, ಐಜಿಪಿ:- ಚಿಕ್ಕಮಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರ.
- ದೇವಜ್ಯೋತ್ ರೇ, ಐಜಿಪಿ:- ಚಾಮರಾಜನಗರ ಮತ್ತು ಹಾಸನ.
- ಪ್ರವೀಣ್ ಮಧುಕರ್ ಪವಾರ್, ಐಜಿಪಿ:- ಉಡುಪಿ ಮತ್ತು ಮಂಗಳೂರು ನಗರ.
- ಸಂದೀಪ್ ಪಾಟೀಲ್, ಐಜಿಪಿ:- ಕೊಡಗು ಮತ್ತು ಹಾವೇರಿ.
ಎಡಿಜಿಪಿ, ಐಜಿಪಿಗಳ ಎರಡು ದಿನದ ಪರಿವೀಕ್ಷಣೆಯಲ್ಲಿ ಮೊದಲ ದಿನ ಡಿಪಿಒ, ಸಿಒಪಿ ತಪಾಸಣೆ, ಅದರ ನಿರ್ವಹಣೆ, ಸ್ವಚ್ಛತೆ, ರಿಜಿಸ್ಟರ್ಗಳ ನಿರ್ವಹಣೆ, ಪೊಲೀಸ್ ಸಿಬ್ಬಂದಿಗಳ ಹುದ್ದೆ, ಬಾಕಿಯಿರುವ ಬಡ್ತಿಗಳು, ಕಟ್ಟಡಗಳ, ವಾಹನಗಳ ರಿಪೇರಿ, ಹೋಂಗಾರ್ಡ್ ಗಳ ಸಂಬಳ, ಬಾಕಿ ಬಿಲ್ ಗಳು, ಎಸ್ ಪಿ/ಡಿಸಿಪಿ/ಸಿಒಪಿಗಳ ಪೊಲೀಸ್ ಠಾಣೆಗಳ ಭೇಟಿ ಮತ್ತು ಮಾಸಿಕ ಅಪರಾಧ ಸಭೆಗಳ ನಿಯಮಿತ ನಡವಳಿಕೆ, ಬಾಕಿ ಇರುವ ಆಡಿಟ್ ವಿಲೇವಾರಿ, ಎಸ್ ಸಿ/ಎಸ್ ಟಿ ಪ್ರಕರಣಗಳು ಮತ್ತು ಪೊಕ್ಸೋ ಪ್ರಕರಣಗಳ ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಮೊದಲ ದಿನ ಪರಿಶೀಲನೆ ನಡೆಸಲಿದ್ದಾರೆ.
ಎರಡನೇ ದಿನ ಪೊಲೀಸ್ ಕ್ವಾಟರ್ಸ್, ಡಿಎಆರ್, ಎಂಟಿ ವಿಭಾಗಗಳ ಪರಿಶೀಲನೆ ನಡೆಸುವುದು, ಪರಿವಿಕ್ಷಣಾ ಸಭೆ ನಡೆಸುವುದು ಮಾಡಲಿದ್ದಾರೆ. ಸಭೆಯಲ್ಲಿ ಜಿಲ್ಲಾ/ನಗರದ ಅಪರಾಧ ಸಭೆಯನ್ನು ಪಿಐ/ಸಿಪಿಐ ಮತ್ತು ಜಿಲ್ಲೆಯ ಉನ್ನತ ಶ್ರೇಣಿಯ ಅಧಿಕಾರಿಗಳು ಹಾರಜರಾಗಬೇಕಿದೆ. ಈ ಸಭೆಯಲ್ಲಿ ರೌಡಿಸಂ ಮತ್ತು ಅವುಗಳ ಮೇಲಿನ ಕ್ರಮ, ಗೂಂಡಾ ಕಾಯ್ದೆ, ಮಾದಕ ವಸ್ತುಗಳ ವಿರುದ್ಧ ಕ್ರಮ, ಸಂಘಟಿತ ಅಪರಾಧಗಳ ವಿರುದ್ಧ ಕ್ರಮ, ಎಸ್ ಸಿ/ಎಸ್ ಟಿ ದೌರ್ಜನ್ಯಗಳ ತಡೆ ಕಾಯ್ದೆ ಪ್ರಕರಣಗಳು ಮತ್ತು ಪೊಕ್ಸೋ ಪ್ರಕರಣಗಳ ಪರಿಶೀಲನೆ ಕೂಡ ನಡೆಯಲಿದೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕ್ರಮ, ಜನಸ್ನೇಹಿ ಪೊಲೀಸಿಂಗ್, ಬೀಟ್ ನಲ್ಲಿರುವ ಸಿಬ್ಬಂದಿಗಳು ಜನರೊಂದಿಗೆ ಸಂವಹನ ನಡೆಸುವ ಮಾಹಿತಿ, ಸೊಕೊ ಮತ್ತು ಮೊಬೈಲ್ ಫೊರೆನ್ಸಿಕ್ ವಾಹನಗಳ ಬಳಕೆ, ಸೈಬರಗ ಅಪರಾಧಗಳ ನೊಂದಣಿ ಅದರ ತನಿಖೆ ಹಾಗೂ ಪತ್ತೆಗೆ ತೆಗೆದುಕೊಂಡ ಕ್ರಮ, ಪೊಲೀಸ್ ಸಿಬ್ಬಂದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸಲು ಗಮನದ ಬಗ್ಗೆ ಚರ್ಚೆ ಮಾಡಲಾಗುತ್ತದೆ.
ಎರಡು ದಿನಗಳ ಎಡಿಜಿಪಿ/ಐಜಿಪಿಗಳ ಎರಡು ದಿನದ ಪರಿವೀಕ್ಷಣೆ ಬಳಿಕ ಕಂಡು ಬಂದ ಸಂಗತಿಗಳು, ಸರಿ-ತಪ್ಪು ಹಾಗೂ ಆಗಬೇಕದ ಕ್ರಮಗಳ ಬಗ್ಗೆ ಪರಿವೀಕ್ಷಣೆ ನಡೆಸಿದ 10 ದಿನದ ಒಳಗೆ ಡಿಜಿ ಅಂಡ್ ಐಜಿಪಿಗೆ ವರದಿ ಸಲ್ಲಿಸಲಿದ್ದು, ಮುಂದಿನ ಕ್ರಮದ ಬಗ್ಗೆ ಡಿಜಿ ಅಂಡ್ ಐಜಿಪಿ ನಿರ್ದರಿಸಲಿದ್ದಾರೆ.