ಟಿಕೆಟ್ ಗಾಗಿ ಸಾಲಿನಲ್ಲಿ ನಿಲ್ಲುವ ಶೈಲಿಗೆ ಪೂರ್ಣ ವಿರಾಮ ಇಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಕಾರ್ಯ ಪ್ರವೃತ್ತವಾಗಿದೆ. ಅದರ ಭಾಗವಾಗಿ ಯುಟಿಎಸ್ ಮೊಬೈಲ್ ಆ್ಯಪ್ ಪರಿಚಯಿಸಿದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ಟಿಕೆಟ್ ಪಡೆಯಬಹುದಾಗಿದೆ.
ಶೇ. 30ರಷ್ಟು ಇಳಿಕೆ
ಈ ಆ್ಯಪ್ ಬಳಕೆಯಿಂದ ಟಿಕೆಟ್ ಕೌಂಟರ್ ಮುಂಭಾಗದ ಶೇ. 30ರಷ್ಟು ಸರದಿ ಸಾಲನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಯುಟಿಎಸ್ ಆ್ಯಪ್ ಮೂಲಕ ಕಾಯ್ದಿರಿಸದ ಸಾಮಾನ್ಯ ಪ್ರಯಾಣದ ಟಿಕೆಟ್, ಫ್ಲಾಟ್ ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್ ಗಳನ್ನು ಸುಲಭವಾಗಿ ಬುಕ್ ಮಾಡಬಹುದು. ನಿಲ್ದಾಣಗಳಲ್ಲಿರುವ ಕ್ಯೂಆರ್ ಕೋಡ್ ಅನ್ನು ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು.
ಕೋಡ್ ಸ್ಕ್ಯಾನ್ ಮಾಡಿದ ನಂತರ ಗ್ರಾಹಕರಿಗೆ ಯಾತ್ರಾ ಟಿಕೆಟ್ ಅಥವಾ ಫ್ಲಾಟ್ ಫಾರ್ಮ್ ಟಿಕೆಟ್ ಬೇಕೆ ಎನ್ನುವ ಆಯ್ಕೆ ಬರುತ್ತದೆ. ಅದನ್ನು ಆರಿಸಬೇಕು. ಬಳಿಕ ಮೊದಲಿನಂತೆ ಟಿಕೆಟ್ ಖರೀದಿಸಬಹುದು. ತಪಾಸಣೆ ಸಮಯದಲ್ಲಿ ಮೊಬೈಲ್ ನಲ್ಲಿರುವ ಟಿಕೆಟ್ ತೋರಿಸಿದರೆ ಸಾಕಾಗುತ್ತದೆ.
ಮತ್ತೊಂದು ವಿಶೇಷ ಎಂದರೆ ಇದಕ್ಕೆ ಇಂಟರ್ ನೆಟ್ ಅಗತ್ಯವಿಲ್ಲ. ಆದರೆ ಯುಟಿಎಸ್ ಆ್ಯಪ್ ಮೂಲಕ ಮೀಸಲು ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಡೆಬಿಟ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮುಂತಾದ ವಿಧಾನಗಳಿಂದ ಹಣ ಪಾವತಿಸಬಹುದು.
ಈ ಆ್ಯಪ್ ಅನ್ನು ಹೈದರಾಬಾದ್ ಮೂಲದ ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್ (ಸಿ.ಆರ್.ಐ.ಎಸ್.) ಅಭಿವೃದ್ದಿ ಪಡಿಸಿ ನಿರ್ವಹಿಸುತ್ತಿದೆ.