ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಮಾದರಿಯಲ್ಲಿ ಈಗ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಕೆಂಪು ಬಣ್ಣ ಹೊಂದಲಿದೆ.
1996 ಕ್ಕಿಂತ ಮೊದಲು ಕೆಎಸ್‌ಆರ್‌ಟಿಸಿ ರಾಜ್ಯಕ್ಕೆ ಒಂದೇ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ 1996-97ರಲ್ಲಿ ವಿಭಜನೆಗೊಂಡು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಸ್ವಿತ್ವಕ್ಕೆ ಬಂದಾಗ ಬಸ್‌ಗಳ ಬಣ್ಣ ಬದಲಾಯಿಸಲಾಗಿತ್ತು. ಕೆಂಪು ಬಣ್ಣದ ಬದಲಾಗಿ ತಿಳಿ ಗಿಣಿಹಸುರು ಬಣ್ಣ, ಮಧ್ಯದಲ್ಲಿ ಹಳದಿ-ಕೆಂಪು ಪಟ್ಟಿ ಹೊಂದಿತ್ತು. ಆದರೆ ಇನ್ನು ಮುಂದೆ ಬರುವ ಎಲ್ಲ ಹೊಸ ಬಸ್‌ಗಳು ಕೆಂಪು, ಬೆಳ್ಳಿ ಬಣ್ಣ ಹೊಂದಿರಲಿವೆ.
ರಾಜ್ಯ ಸರಕಾರ ಈ ವರ್ಷ ಖರೀದಿಸುವ ಸಾವಿರದಷ್ಟು ಹೊಸ ಬಸ್‌ಗಳಲ್ಲಿ ಮೊದಲ ಹಂತದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ ಸುಮಾರು 375 ಬಸ್‌ಗಳು ಬರಲಿವೆ. ಅದರಲ್ಲಿ 40 ಬಸ್‌ಗಳನ್ನು ಕೆಲವು ದಿನಗಳ ಹಿಂದೆಯಷ್ಟೇ ನೀಡಲಾಗಿದೆ. ಇನ್ನು 335 ಬಸ್‌ಗಳು ಬರಬೇಕಿದೆ. ಈ ಹೊಸ ಬಸ್‌ಗಳನ್ನು ತಿಳಿ ಗಿಣಿಹಸುರು ಬಣ್ಣದಿಂದ ಕೆಂಪು ಬಣ್ಣಕ್ಕೆ ಮಾರ್ಪಡಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡ ತಿಳಿಸಿದ್ದಾರೆ.