ಬೆಂಗಳೂರು : ಮಹಿಳೆಯೊಬ್ಬರಿಗೆ ಇನ್ಸ್ಟಾ ಗ್ರಾಂ ಮೂಲಕ ಪರಿಚಿತನಾದ ಯುವಕನೊಬ್ಬ ಆಕೆಯ ಫೋಟೋಗಳನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ಹಣ ದೋಚಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆಯೊಬ್ಬರಿಂದ ಆರೋಪಿಯು ಬರೋಬ್ಬರಿ 8 ಲಕ್ಷ ಹಣ ಹಾಗೂ 240 ಗ್ರಾಂ ಚಿನ್ನಾಭರಣ ದೋಚಿದ್ದಾನೆ.
39 ವರ್ಷದ ಮಹಿಳೆಯೊಬ್ಬರಿಗೆ ಅನ್ಬು ಅಳಗನ್ ಎಂಬ ಯುವಕ ಇನ್ಸ್ಟಾ ಗ್ರಾಂ ಮೂಲಕ ಪರಿಚಿತನಾಗಿದ್ದ. ಬಳಿಕ ಆಕೆಯನ್ನು ಭೇಟಿಯಾಗಿ ಅವಳೊಡನೆ ಫೋಟೋಗಳನ್ನೂ ಸಹ ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಆ ಫೋಟೋಗಳನ್ನು ನಿನ್ನ ಕುಟುಂಬಸ್ಥರಿಗೆ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿ ಹಂತಹಂತವಾಗಿ 8 ಲಕ್ಷ ರೂ. ಹಣ ಹಾಗೂ 240ಗ್ರಾಂ ಚಿನ್ನಾಭರಣ ದೋಚಿದ್ದ. ಆದರೆ ಕೊನೆಗೂ ಆತನ ಬೇಡಿಕೆ ನಿಲ್ಲುವ ಲಕ್ಷಣ ಕಾಣದಿದ್ದಾಗ ಬೇಸತ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಅನ್ಬು ಅಳಗನ್ ನನ್ನು ಬಂಧಿಸಿದ್ದಾರೆ.