ನವದೆಹಲಿ : ನನ್ನ ಸಾರ್ವಜನಿಕ ಜೀವನವು ಚುನಾವಣೆಯಲ್ಲಿ ಸೋಲಿನೊಂದಿಗೆ ಅಂತ್ಯವಾಗುತ್ತದೆ ಅಂತಾ ಭಾವಿಸಿರಲಿಲ್ಲ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಮೋದಿ 2.0 ಸರ್ಕಾರದಲ್ಲಿ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್‌ಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ನ ಶಶಿ ತರೂರ್ ಎದುರು ಸೋಲಪ್ಪಿದ್ದರು. ಈ ಕಾರಣಕ್ಕೆ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ವೇಳೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ ಅವರು, ತಾನು ಬಿಜೆಪಿ ಕಾರ್ಯಕರ್ತನಾಗಿ ಪಕ್ಷದ ಪರವಾಗಿ ಕೆಲಸ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇವತ್ತು ನನ್ನ 18 ವರ್ಷದ ಸಾರ್ವಜನಿಕ ಸೇವೆ ಅಂತ್ಯವಾಗುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ 2.0 ತಂಡದಲ್ಲಿ 3 ವರ್ಷ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು. ಚುನಾವಣೆಯಲ್ಲಿ ಸೋಲು ಮೂಲಕ ನನ್ನ 18 ವರ್ಷದ ಸಾರ್ವಜನಿಕ ಸೇವೆ ನಿಲ್ಲಿಸುತ್ತೇನೆಂದು ಭಾವಿಸಿರಲಿಲ್ಲ. ನನಗೆ ಬೆಂಬಲ ನೀಡಿದ ಕಾರ್ಯಕರ್ತರು, ನಾಯಕರಿಗೆ ನನ್ನ ಧನ್ಯವಾದಗಳು. ಕಳೆದ 3 ವರ್ಷದಲ್ಲಿ ನನ್ನೊಂದಿಗೆ ಇದ್ದ ಸಹೋದ್ಯೋಗಿಗಳಿಗೂ ಧನ್ಯವಾದಗಳು. ಬಿಜೆಪಿ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ಕೆಲಸ ಮುಂದುವರಿಸುತ್ತೇನೆ,’ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.